ಬಜೆಟ್‌ನಲ್ಲಿ ಬಡವರು, ನಿರುದ್ಯೋಗಿಗಳ ಕಡೆಗಣನೆ: ಚಿದಂಬರಂ ಟೀಕೆ

ಹೊಸದಿಲ್ಲಿ, ಫೆ.11: 2021-22ರ ಬಜೆಟ್ ಅನುದಾನ ನಿಗದಿಗೊಳಿಸುವಾಗ ಕೇಂದ್ರ ಸರಕಾರ ಬಡವರು, ನಿರುದ್ಯೋಗಿಗಳು ಹಾಗೂ ಸಣ್ಣ ಮತ್ತು ಮಧ್ಯಮವರ್ಗದ ಉದ್ದಿಮೆಗಳನ್ನು ಸಂಪೂರ್ಣ ಕಡೆಗಣಿಸಿದೆ ಎಂದು ಕೇಂದ್ರದ ಮಾಜಿ ವಿತ್ತಸಚಿವ ಪಿ ಚಿದಂಬರಂ ಟೀಕಿಸಿದ್ದಾರೆ.
ಅನುದಾನಕ್ಕೆ ಹೆಚ್ಚು ಅರ್ಹರಾದವರನ್ನು ಕಣ್ಣೆತ್ತಿಯೂ ನೋಡಿಲ್ಲ. ಬಡವರು, ರೈತರು, ವಲಸೆ ಕಾರ್ಮಿಕರು, ಮಧ್ಯಮವರ್ಗದವರು, ನಿರುದ್ಯೋಗಿಗಳು, ಸಣ್ಣ, ಅತೀಸಣ್ಣ ಮತ್ತು ಮಧ್ಯಮ ವರ್ಗದ ಉದ್ದಿಮೆಗಳನ್ನು ಕಡೆಗಣಿಸಲಾಗಿದೆ ಎಂದು ಬಜೆಟ್ ಬಗ್ಗೆ ರಾಜ್ಯಸಭೆಯಲ್ಲಿ ಮಾತನಾಡಿದ ಚಿದಂಬರಂ ಹೇಳಿದ್ದಾರೆ. ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ನೀಡಿದ ಅನುದಾನದ ಬಗ್ಗೆ ವಿತ್ತಸಚಿವೆ ಮಾಹಿತಿ ನೀಡಿಲ್ಲ. ರಕ್ಷಣಾ ಕ್ಷೇತ್ರಕ್ಕೆ ಈ ವರ್ಷ 3,43,822 ಕೋಟಿ ರೂ. ಅನುದಾನ ಘೋಷಿಸಿದ್ದರೆ 2021-22ರಲ್ಲಿ ಇದನ್ನು 3,47,088 ಕೋಟಿ ರೂ.ಗೆ ಪರಿಷ್ಕರಿಸಲಾಗಿದೆ. ಇದು ಕೇವಲ 3,266 ಕೋಟಿ ರೂ. ಹೆಚ್ಚಳವಾಗಿದೆ ಎಂದು ಚಿದಂಬರಂ ಹೇಳಿದರು. ಬುಧವಾರ ರಾಜ್ಯಸಭೆಯಲ್ಲಿ ಬಜೆಟ್ ಚರ್ಚೆ ಆರಂಭಿಸಿದ್ದ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್, ಸರಕಾರ ತನ್ನ ಆಸ್ತಿಯನ್ನು ನಾಲ್ಕೈದು ‘ಬಿಗ್ ಬಾಯ್’ಗಳ ಕೈಗೆ ಒಪ್ಪಿಸುತ್ತಿದೆ ಎಂದು ಟೀಕಿಸಿದ್ದರು.





