ಡಾಟಾ ಸೋರಿಕೆ ವಿವಾದದ ನಡುವೆಯೇ ಭಾರತೀಯ ಬಳಕೆದಾರರನ್ನು ಓಲೈಸುತ್ತಿರುವ ಟ್ವಿಟರ್ ಪ್ರತಿಸ್ಪರ್ಧಿ ಕೂ

ಹೊಸದಿಲ್ಲಿ,ಫೆ.11: ಟ್ವಿಟರ್‌ನಿಂದ ವಿಮುಖರಾಗಲು ಬಯಸಿರುವ ಒಂದು ವರ್ಗದ ಬಳಕೆದಾರರ ನಡುವೆ ಜನಪ್ರಿಯವಾಗಿರುವ, ಸ್ಥಳೀಯ ಭಾಷೆಗಳಲ್ಲಿ ಲಭ್ಯವಿರುವ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಬೆಂಗಳೂರು ಮೂಲದ ‘ಕೂ’ ಡಾಟಾ ಸೋರಿಕೆ ಮತ್ತು ಚೀನಿ ಹೂಡಿಕೆ ಸೇರಿದಂತೆ ಹಲವಾರು ವಿವಾದಗಳ ಸುಳಿಯಲ್ಲಿ ಸಿಲುಕಿದೆ.
ಕೇಂದ್ರ ಸರಕಾರ ಮತ್ತು ಟ್ವಿಟರ್ ನಡುವೆ ವಾಗ್ಯುದ್ಧದ ಹಿನ್ನೆಲೆಯಲ್ಲಿ ಹಲವಾರು ಸಂಪುಟ ಸಚಿವರು ಮತ್ತು ಸಚಿವಾಲಯಗಳು ಸೇರಿದಂತೆ ತನ್ನ ಬಳಕೆದಾರರ ಸಂಖ್ಯೆಯಲ್ಲಿ ದಿಢೀರ್ ಏರಿಕೆಯನ್ನು ನಿಭಾಯಿಸಲು ತನ್ನ ಸಿಸ್ಟಮ್‌ಗಳನ್ನು ಮೇಲ್ದರ್ಜೆಗೇರಿಸಲು ಕೂ ಪ್ರಯತ್ನಿಸುತ್ತಿರುವಾಗಲೇ ಈ ವಿವಾದಗಳು ಉದ್ಭವಗೊಂಡಿವೆ.
ಈ ಹಿಂದೆ ಆಧಾರ್ ಮತ್ತು ಆರೋಗ್ಯಸೇತು ಆ್ಯಪ್‌ಗಳಲ್ಲಿ ಲೋಪಗಳಿವೆ ಎಂದು ಹೇಳಿದ್ದ ಫ್ರೆಂಚ್ ಸುರಕ್ಷತಾ ಸಂಶೋಧಕ ಎಲಿಯಟ್ ಆಲ್ಡರ್ಸನ್ ಅವರು ಕೂ ಬಳಕೆದಾರರ ಮಾಹಿತಿಗಳನ್ನು ಸೋರಿಕೆ ಮಾಡುತ್ತಿದೆ ಎಂದು ಗುರುವಾರ ಪ್ರತಿಪಾದಿಸಿದ್ದಾರೆ. ಇದನ್ನು ನಿರಾಕರಿಸಿರುವ ಕೂ ಆ್ಯಪ್‌ನ ಸಹಸ್ಥಾಪಕ ಮತ್ತು ಸಿಇಒ ಅಪ್ರಮೇಯ ರಾಧಾಕೃಷ್ಣ ಅವರು,ಬಳಕೆದಾರರು ಕೂ ಆ್ಯಪ್‌ನ ತಮ್ಮ ಪ್ರೊಫೈಲ್‌ನಲ್ಲಿ ಸ್ವಯಂ ಇಚ್ಛೆಯಿಂದ ಪ್ರದರ್ಶಿಸಿರುವ ಮಾಹಿತಿಗಳು ಮಾತ್ರ ಗೋಚರಿಸುತ್ತವೆ ಮತ್ತು ಇದನ್ನು ಡಾಟಾ ಸೋರಿಕೆ ಎನ್ನುವಂತಿಲ್ಲ. ಯೂಸರ್ ಪ್ರೊಫೈಲ್‌ಗೆ ಭೇಟಿ ನೀಡಿದರೆ ಯಾರು ಬೇಕಾದರೂ ಮಾಹಿತಿಗಳನ್ನು ನೋಡಬಹುದು ಎಂದು ಟ್ವೀಟಿಸಿದ್ದಾರೆ.
ಇದಕ್ಕೆ ಚುರುಕಾಗಿ ಪ್ರತಿಕ್ರಿಯಿಸಿರುವ ಆಲ್ಡರ್ಸನ್,ಕೂ ಸ್ಥಾಪಕರು ಹೇಳಿರುವುದು ಸುಳ್ಳು. ಟ್ವೀಟಿಸುವ ಮುನ್ನ ಈ ಅಂಶವನ್ನು ತಾನು ಪರಿಶೀಲಿಸಿದ್ದೇನೆ. ಅವರು ಹೇಳಿರುವುದು ನಿಜವಲ್ಲ ಎಂದಿದ್ದಾರೆ.
ತನ್ನನ್ನು ಆತ್ಮನಿರ್ಭರ ಭಾರತ ಆ್ಯಪ್ ಎಂದು ಕರೆದುಕೊಳ್ಳುವ ಕೂ ಚೀನಾದಿಂದ ಹೂಡಿಕೆ ವಿವಾದವನ್ನೂ ಎದುರಿಸುತ್ತಿದೆ. ಎರಡೂವರೆ ವರ್ಷಗಳ ಹಿಂದೆ ತಮ್ಮ ಮೊದಲಿನ ಬ್ರಾಂಡ್ ವೋಕಲ್‌ನಲ್ಲಿ ಹೂಡಿಕೆ ಮಾಡಿದ್ದ ಚೀನಾದ ಷನ್‌ವಿ ಈಗ ಸಂಪೂರ್ಣವಾಗಿ ನಿರ್ಗಮಿಸುತ್ತಿದೆ. ಮೋಹನದಾಸ ಪೈ ಅವರ 3ವನ್4 ಕ್ಯಾಪಿಟಲ್ ಇತ್ತೀಚಿಗೆ ತಮ್ಮ ಬಾಂಬಿನೇಟ್ ಟೆಕ್ನಾಲಜಿಸ್‌ನಲ್ಲಿ ಹೂಡಿಕೆ ಮಾಡಿದ್ದು,ಇತರ ಹೂಡಿಕೆದಾರರೂ ಭಾರತಿಯರೇ ಆಗಿದ್ದಾರೆ ಎಂದು ಅಪ್ರಮೇಯ ತಿಳಿಸಿದ್ದಾರೆ.
ತನ್ನ ಸಿರೀಸ್ ‘ಎ’ ಫಂಡಿಂಗ್‌ನ ಭಾಗವಾಗಿ ತಾನು 41 ಲ.ಡಾ.(ಸುಮಾರು 29.80 ಕೋ.ರೂ.)ಗಳ ಹೂಡಿಕೆಗಳನ್ನು ಸಂಗ್ರಹಿಸಿರುವುದಾಗಿ ಕೂ ಕೆಲವು ದಿನಗಳ ಹಿಂದೆ ಪ್ರಕಟಿಸಿತ್ತು.







