'ಸಿಸಿಬಿ ಚಾರ್ಜ್‍ಶೀಟ್ ಸಲ್ಲಿಸುವಂತಿಲ್ಲ' ಎಂಬ ಹೈಕೋರ್ಟ್ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಕೆ

ಬೆಂಗಳೂರು, ಫೆ.11: ಗಂಭೀರ ಪ್ರಕರಣಗಳ ಕುರಿತಂತೆ ತನಿಖೆ ನಡೆಸುವ ಸಿಸಿಬಿಗೆ ಚಾರ್ಜ್‍ಶೀಟ್ ಸಲ್ಲಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಸಿಸಿಬಿ ಅಧಿಕಾರಿಗಳು ಹೈಕೋರ್ಟ್ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದಾರೆ.
ಎಫ್‍ಐಆರ್ ದಾಖಲಿಸಿಕೊಳ್ಳುವ ಪೊಲೀಸ್ ಠಾಣೆಯವರೇ ಚಾರ್ಜ್‍ಶೀಟ್ ಸಲ್ಲಿಸಬೇಕು ಎಂದು ಹೈಕೋರ್ಟ್ ಆದೇಶವನ್ನು ನೀಡಿದೆ. ಆದರೆ, ಸಿಸಿಬಿ ಅವರು ಈಗಾಗಲೇ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮಾಜಿ ಮೇಯರ್ ಸಂಪತ್ ರಾಜ್, ಮಾಜಿ ಕಾರ್ಪೋರೇಟರ್ ಝಾಕೀರ್ ತನಿಖೆ ಸೇರಿ ಆರು ಪ್ರಕರಣಗಳ ತನಿಖೆಯನ್ನು ಪೂರ್ಣಗೊಳಿಸಿ ಚಾರ್ಜ್ ಶೀಟ್ ಸಲ್ಲಿಸಲು ಮುಂದಾಗಿದ್ದರು. ಆದರೆ, ಹೈಕೋರ್ಟ್ ಆದೇಶದಿಂದ ಸಿಸಿಬಿಗೆ ಹಿನ್ನಡೆಯಾಗಿದೆ.
ತಮ್ಮ ಬಳಿಯಿರುವ ಪ್ರಕರಣಗಳ ತನಿಖೆ ನಡೆಸಿ ಪೊಲೀಸ್ ಠಾಣೆಗೆ ವರ್ಗಾಯಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ರಾಗಿಣಿ, ಗಲ್ರಾನಿ ವಿರುದ್ಧದ ಡ್ರಗ್ ಪ್ರಕರಣದ ತನಿಖೆಯನ್ನು ಅಂತಿಮ ಹಂತಕ್ಕೆ ತಂದಿದ್ದರು. ಬಹುಕೋಟಿ ವಂಚಕ ಯುವರಾಜ್ ಪ್ರಕರಣದಲ್ಲಿ ಕಳೆದ 50 ದಿನಗಳಿಂದ ಪ್ರಕರಣದ ಬೆನ್ನು ಬಿದ್ದಿದ್ದ ಸಿಸಿಬಿ, ಆರು ಪ್ರಕರಣಗಳ ತನಿಖೆ ನಡೆಸಿ ಚಾರ್ಜ್ ಶೀಟ್ ಸಿದ್ಧಪಡಿಸಿಕೊಂಡಿತ್ತು. ಇನ್ನೇನು ಚಾರ್ಜ್‍ಶೀಟ್ ಸಲ್ಲಿಸಬೇಕು ಎನ್ನುವಷ್ಟರಲ್ಲೇ ಕೋರ್ಟ್ ಈ ಆದೇಶವನ್ನು ನೀಡಿದೆ.
ಸದ್ಯ ಸಿಸಿಬಿ ಪೊಲೀಸರ ಕೈಯಲ್ಲಿ ನಾಲ್ಕು ಪ್ರಮುಖ ಪ್ರಕರಣಗಳಿದ್ದರೂ, ಹೈಕೋರ್ಟ್ ಆದೇಶದಂತೆ ಪ್ರಕರಣಗಳ ಚಾರ್ಜ್ ಶೀಟ್ ಸಿಸಿಬಿ ಸಲ್ಲಿಸುವಂತಿಲ್ಲ. ಯಾವ ಠಾಣೆಯಲ್ಲಿ ಕೇಸ್ ದಾಖಲಾಗಿದೆಯೋ ಆ ಠಾಣೆಯ ಪೊಲೀಸರೇ ಚಾರ್ಜ್ ಶೀಟ್ ಹಾಕಬೇಕು. ಹೀಗಾಗಿ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಿಸಿಬಿ ಮೇಲ್ಮನವಿ ಸಲ್ಲಿಸಿ, ಮುಂದಿನ ಆದೇಶಕ್ಕಾಗಿ ಕಾದಿದೆ.







