ಪೆಟ್ರೋಲ್,ಡೀಸೆಲ್ ಬೆಲೆ ಮತ್ತೆ ಏರಿಕೆ: ಮುಂಬೈನಲ್ಲಿ ಪೆಟ್ರೋಲ್‌ಗೆ 94.36 ರೂ.!

ಹೊಸದಿಲ್ಲಿ,ಫೆ.11: ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 61 ಡಾಲರ್ ದಾಟಿರುವ ಹಿನ್ನೆಲೆಯಲ್ಲಿ ಭಾರತದ ತೈಲ ಮಾರಾಟ ಕಂಪನಿಗಳು ಗುರುವಾರ ಮತ್ತೆ ಇಂಧನ ದರಗಳನ್ನು ಹೆಚ್ಚಿಸಿವೆ. ಪರಿಣಾಮವಾಗಿ ಮುಂಬೈ ಮಹಾನಗರದಲ್ಲೀಗ ಪ್ರತಿ ಲೀ.ಪೆಟ್ರೋಲ್‌ಗೆ 94.36 ರೂ. ಮತ್ತು ಪ್ರತಿ ಲೀ. ಡೀಸೆಲ್‌ಗೆ 84.94 ರೂ.ಆಗಿದ್ದು,ಇವು ದೇಶದಲ್ಲಿಯೇ ಗರಿಷ್ಠ ಬೆಲೆಗಳಾಗಿವೆ.
ರಾಜಧಾನಿ ದಿಲ್ಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು 25 ಮತ್ತು 30 ಪೈಸೆ ಹೆಚ್ಚಿಸಲಾಗಿದ್ದು,ಪ್ರತಿ ಲೀ.ಗೆ ಬೆಲೆಗಳು ಅನುಕ್ರಮವಾಗಿ 87.85 ರೂ.ಮತ್ತು 78.03 ರೂ.ಗಳ ಸಾರ್ವಕಾಲಿಕ ಎತ್ತರವನ್ನು ತಲುಪಿವೆ.
ದೇಶಾದ್ಯಂತ ಸ್ಥಳೀಯ ತೆರಿಗೆಗಳನ್ನು ಅವಲಂಬಿಸಿ ಪೆಟ್ರೋಲ್ ಬೆಲೆಗಳನ್ನು 22ರಿಂದ 24 ಪೈಸೆ ಮತ್ತು ಡೀಸೆಲ್ ಬೆಲೆಗಳನ್ನು 28ರಿಂದ 31 ಪೈಸೆ ಹೆಚ್ಚಿಸಲಾಗಿದೆ.
2021ರಲ್ಲಿ ಈವರೆಗೆ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು 15 ಸಲ ಹೆಚ್ಚಿಸಲಾಗಿದ್ದು, ಅನುಕ್ರಮವಾಗಿ ಪ್ರತಿ ಲೀ.ಗೆ 4.14 ರೂ.ಮತ್ತು 4.16 ರೂ.ಏರಿಕೆಯಾಗಿವೆ.





