ರೆಂಜಿಲಾಡಿ: ಮರವೇರಿ ಕುಳಿತಿದ್ದ ಚಿರತೆಯ ಸೆರೆ
ಅರಣ್ಯ ಇಲಾಖೆ ಸಿಬ್ಬಂದಿಯ ಯಶಸ್ವಿ ಕಾರ್ಯಾಚರಣೆ

* ದಂಪತಿಯ ಮೇಲೆ ದಾಳಿ ಮಾಡಿ ಆತಂಕ ಸೃಷ್ಟಿಸಿದ್ದ ಚಿರತೆ
ಕಡಬ, ಫೆ.12: ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ರೆಂಜಿಲಾಡಿಯಲ್ಲಿ ಇಂದು ಮುಂಜಾವ ದಂಪತಿಯ ಮೇಲೆ ದಾಳಿ ಮಾಡಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ರೆಂಜಿಲಾಡಿಯ ಹೇರ ನಿವಾಸಿ ಚಂದ್ರಶೇಖರ್ ಕಾಮತ್ ಹಾಗೂ ಅವರ ಪತ್ನಿ ಸೌಮ್ಯಾ ಕಾಮತ್ ಶುಕ್ರವಾರ ಬೆಳಗಿನ ಜಾವ ತೋಟಕ್ಕೆ ಸ್ಪಿಂಕ್ಲರ್ ಪೈಪ್ ಜೆಟ್ ಬದಲಾಯಿಸಲು ತೆರಳಿದ್ದ ವೇಳೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿತ್ತು. ಬಳಿಕ ಚಿರತೆಯು ತೋಟದಲ್ಲೇ ಉಳಿದುಕೊಂಡಿರುವ ಶಂಕೆ ವ್ಯಕ್ತವಾಗಿತ್ತು. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಇಂದು ಬೆಳಗ್ಗೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿತ್ತು. ಕೆಲ ಹೊತ್ತು ಶೋಧ ನಡೆಸಿದಾಗ ಚಿರತೆಯು ಮರವೊಂದರ ಮೇಲೇರಿ ಕುಳಿತಿರುವುದು ಪತ್ತೆಯಾಗಿತ್ತು.
ಪಿಲಿಕುಳ ನಿಸರ್ಗಧಾಮದ ನುರಿತ ಶೂಟರ್ ಡಾ.ಯಶಸ್, ಸುಳ್ಯ ಎಸಿಎಫ್ ಆಸ್ಟಿನ್ ಪಿ. ಸೋನ್ಸ್, ಅರಣ್ಯ ವಲಯಾಧಿಕಾರಿಗಳಾದ ರಾಘವೇಂದ್ರ, ಮಂಜುನಾಥ್ ಹಾಗೂ ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ನಡೆಸಿ ಅರಿವಳಿಕೆ ಮದ್ದು ಬಳಸಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ.









