ʼಪತ್ರಕರ್ತರನ್ನು ಗಲ್ಲಿಗೇರಿಸಿ' ಎಂದು ಕರೆ ನೀಡಿದ ಯೂಟ್ಯೂಬ್ ವೀಡಿಯೋವನ್ನು ಹಾಡಿ ಹೊಗಳಿದ ಬಿಜೆಪಿ ನಾಯಕರು

photo: Newslaundry
ಹೊಸದಿಲ್ಲಿ: ಮಂಗಳವಾರ 'ದಿ ಸ್ಟ್ರಿಂಗ್' ಎಂಬ ಯೂಟ್ಯೂಬ್ ಖಾತೆಯಿಂದ ಯೂಟ್ಯೂಬರ್ ಒಬ್ಬರು ಪತ್ರಕರ್ತರು ಹಾಗೂ ಹೋರಾಟಗಾರರನ್ನು ಗಲ್ಲಿಗೇರಿಸಬೇಕು ಎಂದು ಕರೆ ನೀಡುವ ಆಕ್ಷೇಪಾರ್ಹಾ ವೀಡಿಯೋ ಪೋಸ್ಟ್ ಮಾಡಿದ್ದು, ಅದನ್ನು ಕಪಿಲ್ ಮಿಶ್ರಾ, ತಜೀಂದರ್ ಬಗ್ಗಾ, ಎಸ್.ಜಿ ಸೂರ್ಯ ಸಹಿತ ಹಲವು ಬಿಜೆಪಿ ನಾಯಕರು ಶ್ಲಾಘಿಸಿ ಹಲವರು ಹುಬ್ಬೇರುಂತೆ ಮಾಡಿದ್ದಾರಲ್ಲದೆ ಈ ವೀಡಿಯೋ ಒಂದು ʼಪ್ರಾಮಾಣಿಕ ಉದ್ದೇಶʼ ಹೊಂದಿದೆ ಹಾಗೂ ಅದರಲ್ಲಿ ಅಕ್ರಮ ಅಥವಾ ನಿಂದನಾತ್ಮಕವಾಗಿರುವುದು ಏನೂ ಇಲ್ಲ ಎಂದೂ ಹೇಳಿಕೊಂಡಿದ್ದಾರೆ.
"ಅರೆಸ್ಟ್ ರಾಠೀ, ಝುಬೈರ್, ಬರ್ಖಾ ನೌ! (ಗ್ರೇಟಾ ಟೂಲ್ ಕಿಟ್ ಎಕ್ಸ್ ಪೋಸ್ಡ್) ಎಂಬ ಶೀರ್ಷಿಕೆಯ ಈ ವೀಡಿಯೋದಲ್ಲಿ ಹಲವಾರು ಪತ್ರಕರ್ತರು ಹೊರಾಟಗಾರರು ಹಾಗೂ ಮಾಧ್ಯಮ ಸಂಘಟನೆಗಳು ಸ್ಥಾಪಿತ ಹಿತಾಸಕ್ತಿ ಹೊಂದಿದ್ದಾರೆ ಹಾಗೂ ಅವರೇ ನಿಜವಾದ ಗೋದಿ ಮೀಡಿಯಾ ಎಂದು ಹೇಳಿಕೊಂಡಿತ್ತು.
ಖ್ವಿಂಟ್, ನ್ಯೂಸ್ ಲಾಂಡ್ರಿ, ಸ್ಕ್ರೋಲ್, ಆಲ್ಟ್ ನ್ಯೂಸ್, ದಿ ವೈರ್, ದಿ ನ್ಯೂಸ್ ಮಿನಿಟ್, ಇಂಡಿಯಾ ಸ್ಪೆಂಡ್, ಔಟ್ಲುಕ್, ಪರಿ ಮುಂತಾದ ಸುದ್ದಿ ತಾಣಗಳ ಪತ್ರಕರ್ತರನ್ನು ಗಲ್ಲಿಗೇರಿಸಬೇಕು ಎಂದು ವೀಡಿಯೋದಲ್ಲಿ ಹೇಳಲಾಗಿತ್ತು.
ಆದರೆ ಈ ಆಕ್ಷೇಪಾರ್ಹ ವೀಡಿಯೋವನ್ನು ನಂತರ ಯೂಟ್ಯೂಬಿನಿಂದ ತೆಗೆದು ಹಾಕಲಾಗಿತ್ತಾದರೂ ಅದು ವಿವಾದಾತ್ಮಕ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರಿಗೆ ಹಿಡಿಸಿಲ್ಲ. "ಇದು ಅಸ್ವೀಕಾರಾರ್ಹ, ಆ ವೀಡಿಯೋ ಸತ್ಯ ಹೊರತರುತ್ತಿತ್ತು ಅದರಲ್ಲಿ ಅಕ್ರಮ ಹಾಗೂ ನಿಂದನಾತ್ಮಕವೇನೂ ಇಲ್ಲ" ಎಂದು ಟ್ವೀಟ್ ಮಾಡಿದ್ದಾರೆ.
ಮುಂಬೈ ಬಿಜೆಪಿಯ ಅಧಿಕೃತ ವಕ್ತಾರರು "ಈ ವೀಡಿಯೋ ದೊಡ್ಡ ಎಕ್ಸ್ ಪ್ಲೋಸಿವ್ ಸ್ಟೋರಿ" ಎಂದು ಬಣ್ಣಿಸಿ ಟ್ವೀಟ್ ಮಾಡಿದ್ದಾರೆ. "ಈ ವೀಡಿಯೋದಿಂದ 70 ವರ್ಷ ಹಳೆಯ ಇಕೋಸಿಸ್ಟಂ ಅದುರಿದೆ" ಎಂದು ತಜೀಂದರ್ ಬಗ್ಗಾ ಟ್ವೀಟ್ ಮಾಡಿದ್ದಾರೆ. ಮಾಜಿ ಶಿವಸೇನೆ ಸದಸ್ಯ ರಮೇಶ್ ಸೋಳಂಕಿ, ಓಪ್ ಇಂಡಿಯಾದ ನೂಪುರ್ ಶರ್ಮ ಹಾಗೂ ಇಂಡಿಕ್ ಪ್ರಕಾಶಕ ಸಂಕ್ರಾಂತ್ ಸಾನು ಕೂಡ ವೀಡಿಯೋದ ಬೆಂಬಲಿಗರಲ್ಲಿ ಸೇರಿದ್ದಾರೆ.











