ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮಲಯಾಳಂ ಚಿತ್ರ ನಿರ್ದೇಶಕ, ನಟ ಮೇಜರ್ ರವಿ
"ಕೇರಳದ 90% ಬಿಜೆಪಿಗರು ನಂಬಿಕೆಗೆ ಯೋಗ್ಯರಲ್ಲ"

ಕೊಚ್ಚಿ: ಜನಪ್ರಿಯ ಮಲಯಾಳಂ ಚಲನಚಿತ್ರ ನಿರ್ದೇಶಕ ಮತ್ತು ನಟ ಮೇಜರ್ ರವಿ ಬಿಜೆಪಿ ತೊರೆದು ಇಂದು ಕಾಂಗ್ರೆಸ್ ಸೇರಿದ್ದಾರೆ. ಇತ್ತೀಚಿಗಿನ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಪರ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ರವಿ ರಾಜ್ಯ ಬಿಜೆಪಿ ನಾಯಕತ್ವದ ಬಗ್ಗೆ ಅಸಮಾಧಾನ ಹೊಂದಿದ್ದಾರೆನ್ನಲಾಗಿದೆ. ಕೇರಳದಲ್ಲಿರುವ ಶೇ 90ರಷ್ಟು ಬಿಜೆಪಿ ನಾಯಕರು ನಂಬಿಕೆಗೆ ಯೋಗ್ಯರಲ್ಲ ಎಂದು ಇತ್ತೀಚೆಗಷ್ಟೇ ಅವರು ಹೇಳಿದ್ದರು.
ಎರ್ಣಾಕುಳಂನ ತ್ರಿಪೂನಿತ್ತರ ಎಂಬಲ್ಲಿ ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಅವರು ಆಯೋಜಿಸಿದ್ದ ಐಶ್ವರ್ಯ ಕೇರಳ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ರವಿ, ಕೇರಳದಲ್ಲಿ ಈಗಿನ ಎಲ್‍ಡಿಎಫ್ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ಅಗತ್ಯವಿದೆ ಎಂದು ಹೇಳಿದರು.
"ಯುಡಿಎಫ್ ಅಧಿಕಾರಕ್ಕೆ ಬಂದಿದ್ದೇ ಆದಲ್ಲಿ ಎಲ್‍ಡಿಎಫ್ ಸರಕಾರ ಹಿಂದಿನ ಬಾಗಿಲಿನ ಮೂಲಕ ಮಾಡಿದ ಎಲ್ಲಾ ನೇಮಕಾತಿಗಳನ್ನು ರದ್ದುಗೊಳಿಸಬೇಕು" ಎಂದು ಅವರು ಹೇಳಿದರು.
ರಕ್ಷಣಾ ಇಲಾಖೆ ಕಾರ್ಯಾಚರಣೆಗಳ ಕುರಿತು ಸರಣಿ ಚಲನಚಿತ್ರಗಳನ್ನು ರವಿ ನಿರ್ದೇಶಿಸಿದ್ದರು.





