ಸೈಬರ್ ಅಪರಾಧ ಕೃತ್ಯಗಳ ಸವಾಲು ಎದುರಿಸಲು ಪೊಲೀಸ್ ಇಲಾಖೆ ಸಜ್ಜು: ಸಿಎಂ ಯಡಿಯೂರಪ್ಪ

ಬೆಂಗಳೂರು, ಫೆ.12: ಭವಿಷ್ಯದಲ್ಲಿ ಸೈಬರ್ ಅಪರಾಧ ಕೃತ್ಯಗಳು ಪೊಲೀಸ್ ಇಲಾಖೆಗೆ ಬಹುದೊಡ್ಡ ಸವಾಲಾಗಲಿದ್ದು, ಇಂತಹ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸರಕಾರ ಕ್ರಮ ವಹಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಏರ್ಪಡಿಸಿದ್ದ ಪೊಲೀಸ್ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸೈಬರ್ ಅಪರಾಧ ಕೃತ್ಯಗಳನ್ನು ಹತ್ತಿಕ್ಕಲು ನಗರದಲ್ಲಿ 8 ಪೊಲೀಸ್ ಠಾಣೆಗಳನ್ನು ಆರಂಭಿಸಲಾಗಿದೆ. ಅಲ್ಲದೆ, ಬೆಂಗಳೂರು ಸೇರಿದಂತೆ ರಾಜ್ಯದ ಸುರಕ್ಷತೆ ಕಾಪಾಡಲು ಉಗ್ರಗಾಮಿ ನಿಗ್ರಹದಳ ಸ್ಥಾಪಿಸಲಾಗಿದೆ ಎಂದರು.
ಸುರಕ್ಷತೆಗೆ ಆದ್ಯತೆ: ರಾಜ್ಯದಲ್ಲಿ ಅಪರಾಧ ಕೃತ್ಯಗಳು ಕಡಿಮೆ ಇರುವುದು ಅಂಕಿ-ಅಂಶಗಳಿಂದ ಸಾಬೀತಾಗಿದೆ. ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳ ಕಠಿಣ ಶ್ರಮದಿಂದ ಘೋರ ಅಪರಾಧ ಕೃತ್ಯಗಳನ್ನು ಕಡಿಮೆ ಮಾಡಲಾಗಿದೆ ಎಂದ ಅವರು, ಮಹಿಳಾ ಮತ್ತು ಮಕ್ಕಳ ಸುರಕ್ಷತೆಗೆ ನಮ್ಮ ಸರಕಾರ ಆದ್ಯತೆ ನೀಡಿದೆ. ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯಲ್ಲಿ ದೇಶದ ಇತರೆ ರಾಜ್ಯಗಳಿಗಿಂತ ಉತ್ತಮ ಸ್ಥಾನವನ್ನು ಪಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಯೋಮಿತಿ ಸಡಿಲಿಕೆ: ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಗಳು(ಪಿಎಎಸ್ಸೈ) ನೇಮಕಾತಿಯ ವಯೋಮಿತಿಯನ್ನು 2 ವರ್ಷಗಳ ಕಾಲ ಹೆಚ್ಚಳ ಮಾಡಿದ್ದು, ಮಹಿಳಾ ಮೀಸಲಾತಿಯನ್ನು ಶೇ.25ಕ್ಕೆ ಹೆಚ್ಚಿಸಲಾಗಿದೆ. 61 ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಇದರಿಂದ ಎಸ್ಸಿ-ಎಸ್ಟಿ, ಹಿಂದುಳಿದ ವರ್ಗ ಹಾಗೂ ಮಹಿಳೆಯರಿಗೆ ಅನುಕೂಲವಾಗಲಿದೆ ಎಂದರು.
ಮುನ್ನೆಚ್ಚರಿಕೆ ವಹಿಸಿ: ‘ರಾಜ್ಯದ ಯಾವುದೇ ಮೂಲೆಯಲ್ಲೂ ಕೋಮುಗಲಭೆಗಳು ಸಂಭವಿಸದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವ ಪೊಲೀಸ್ ಅಧಿಕಾರಿಗಳ ಶ್ರಮವನ್ನು ಸಮ್ಮೇಳನದ ಆರಂಭದಲ್ಲೇ ಪ್ರಶಂಸಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಅಯೋಧ್ಯೆ ತೀರ್ಪು, ನಂತರದ ಬೆಳವಣಿಗೆಗಳಲ್ಲಿ ರಾಜ್ಯದ ಯಾವುದೇ ಭಾಗದಲ್ಲಿ ಗಲಾಟೆಗಳು ಸಂಭವಿಸದಂತೆ ಕ್ರಮಗಳನ್ನು ಕೈಗೊಂಡ ರಾಜ್ಯದ ಪೊಲೀಸರು ದೇಶಕ್ಕೆ ಮಾದರಿಯಾಗಿದ್ದಾರೆಂದು ಬಣ್ಣಿಸಿದರು ಎಂದು ಗೊತ್ತಾಗಿದೆ.
‘ಅಪರಾಧ ಕೃತ್ಯಗಳನ್ನು ಒಂದೆರೆಡು ಕಡೆಗಳಲ್ಲಿ ಪೊಲೀಸ್ ಅಧಿಕಾರಿಗಳು ಬೆಂಬಲಿಸಿರುವುದು ನನ್ನ ಗಮನಕ್ಕೆ ಬಂದಿದೆ. ಮುಂದೆ ಈ ರೀತಿಯ ಕೃತ್ಯಗಳು ಕಂಡು ಬಂದರೆ ಅದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿರುವ ಯಡಿಯೂರಪ್ಪ, ಇನ್ನು ಮುಂದೆ ನಿಗದಿಯಂತೆ ಪ್ರತಿ ವರ್ಷ ಪೊಲೀಸ್ ಸಮ್ಮೇಳನ ನಡೆಸಲು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ರಜನೀಶ್ ಗೊಯೆಲ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಹಿರಿಯ ಅಧಿಕಾರಿಗಳಾದ ಶರತ್ ಚಂದ್ರ, ಭಾಸ್ಕರ್ ರಾವ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.







