ಶಾಲಾ ಶುಲ್ಕ ಪಾವತಿಸಲಾಗದೇ ಆತ್ಮಹತ್ಯೆಗೈದ ಹತ್ತನೇ ತರಗತಿ ವಿದ್ಯಾರ್ಥಿನಿ

ಹೈದರಾಬಾದ್: ತಾನು ಕಲಿಯುತ್ತಿದ್ದ ಖಾಸಗಿ ಶಾಲೆ ಬೇಡಿಕೆಯಿರಿಸಿದ್ದ ಶುಲ್ಕವನ್ನು ಪಾವತಿಸಲು ಅಸಾಧ್ಯವಾಗದೆ ಹತ್ತನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಇಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಹದಿನೈದು ವರ್ಷದ ಬಾಲಕಿ ಯಶಸ್ವಿನಿ ಇಲ್ಲಿನ ರವೀಂದ್ರ ಭಾರತಿ ಶಾಲೆಯ ವಿದ್ಯಾರ್ಥಿನಿಯಾಗಿದ್ದಳು. ಶಾಲಾಡಳಿತ ರೂ. 3,000 ಶುಲ್ಕ ಪಾವತಿಸುವಂತೆ ಆಕೆಯ ಮೇಲೆ ಒತ್ತಡ ಹೇರಿತ್ತೆನ್ನಲಾಗಿದ್ದು, ಬಡ ದಿನಗೂಲಿ ಕಾರ್ಮಿಕರಾಗಿರುವ ಆಕೆಯ ಹೆತ್ತವರು ಈ ಮೊತ್ತವನ್ನು ಪಾವತಿಸಲು ಅಸಮರ್ಥರಾಗಿದ್ದರು ಎನ್ನಲಾಗಿದೆ.
ಶಾಲಾಡಳಿತ ಶುಲ್ಕ ಪಾವತಿಸುವಂತೆ ಒತ್ತಡ ಹೇರಿರುವ ಕುರಿತು ಬಾಲಕಿಯ ತಂದೆ ಹರಿಪ್ರಸಾದ್ ಪೊಲೀಸ್ ದೂರು ನೀಡಿದ್ದಾರೆ. ಆದರೆ ಆಕೆಯ ಆತ್ಮಹತ್ಯೆಗಿಂತ ಮೊದಲು ದೂರು ನೀಡಿದ್ದರೇ ಅಥವಾ ನಂತರ ನೀಡಿದ್ದರೇ ಎಂಬುದು ತಿಳಿದಿಲ್ಲ.
ಶಾಲೆಯಲ್ಲಿ ಶುಲ್ಕ ಪಾವತಿಸಿಲ್ಲದೇ ಇರುವುದರಿಂದ ಅವಮಾನವುಂಟಾಗುತ್ತದೆ ಎಂದು ಭಯಪಟ್ಟು ವಿದ್ಯಾರ್ಥಿನಿ ಶಾಲೆಗೆ ಹೋಗುವುದಿಲ್ಲವೆಂದು ಹೇಳಿದ್ದಳು ಹಾಗೂ ಆಕೆಗೆ ಸೌಖ್ಯವಿಲ್ಲ ಆಸ್ಪತ್ರೆಯಲ್ಲಿದ್ದಾಳೆಂದು ಶಾಲಾಡಳಿತಕ್ಕೆ ತಿಳಿಸುವಂತೆಯೂ ಹೇಳಿದ್ದಳು ಎಂದು ಆಕೆಯ ತಂದೆ ಹೇಳಿದ್ದಾರೆ. ಆದರೆ ಶಾಲೆಗೆ ಹೋಗದೆ ಮನೆಯಲ್ಲಿಯೇ ಉಳಿದುಕೊಂಡಿದ್ದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕೋವಿಡ್ ಸಾಂಕ್ರಾಮಿಕದಿಂದಾಗಿ ಆಕೆಯ ಹೆತ್ತವರು ಕೆಲಸ ಕಳೆದುಕೊಂಡಿದ್ದರೆನ್ನಲಾಗಿದ್ದು ಮೂರು ತಿಂಗಳ ಹಿಂದೆಯಷ್ಟೇ ಶಾಲಾ ಶುಲ್ಕದ ಭಾಗವಾಗಿ ರೂ 15,000 ಪಾವತಿಸಲಾಗಿತ್ತು ಎಂದು ಹೇಳಿಕೊಂಡಿದ್ದಾರೆ.
ಶಾಲೆಯಲ್ಲಿ ಆಕೆಗೆ ಕಿರುಕುಳ ನೀಡಲಾಗಿತ್ತು ಎಂದು ಆಕೆಯ ಹೆತ್ತವರು ಆರೋಪಿಸಿಲ್ಲ ಆದರೆ ಶಾಲೆಯಲ್ಲಿ ಅವಮಾನವಾಗಬಹುದೆಂಬ ಅಂಜಿಕೆಯಿಂದ ಆಕೆ ಇಂತಹ ವಿಪರೀತ ಕ್ರಮಕ್ಕೆ ಮೊರೆ ಹೋಗಿದ್ದಳೆಂದು ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.







