ಮಣಿಪಾಲದ ರಶ್ಮಿ ಸಾಮಂತ್ ಆಕ್ಸ್‌ಫರ್ಡ್ ವಿವಿ ವಿದ್ಯಾರ್ಥಿ ಒಕ್ಕೂಟದ ಪ್ರಥಮ ಭಾರತೀಯ ಅಧ್ಯಕ್ಷೆ

ಉಡುಪಿ, ಫೆ.12: ಮಣಿಪಾಲದ ರಶ್ಮಿ ಸಾಮಂತ್ ಅವರು ವಿಶ್ವದ ಪ್ರತಿಷ್ಠಿತ ವಿವಿಗಳಲ್ಲಿ ಒಂದಾದ ಆಕ್ಸ್‌ಫರ್ಡ್ ವಿದ್ಯಾರ್ಥಿ ಒಕ್ಕೂಟದ ಪ್ರಪ್ರಥಮ ಭಾರತೀಯ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ಮಣಿಪಾಲ ಮಾಹೆಯ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯ ಹಳೆ ವಿದ್ಯಾರ್ಥಿಯಾಗಿರುವ ರಶ್ಮಿ ಸಾಮಂತ್, ಫೆ.11ರಂದು ಆಕ್ಸ್‌ಫರ್ಡ್ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿ ಈ ಪ್ರತಿಷ್ಠಿತ ಸ್ಥಾನಕ್ಕೆ ಆಯ್ಕೆಯಾದರು. ಸಾಮಂತ್ ಗೆಲುವು ಐತಿಹಾಸಿಕ ಎನಿಸಿದ್ದು, ಆಕೆಯ ಮೂವರು ಎದುರಾಳಿಗಳು ಪಡೆದ ಒಟ್ಟು ಮತಕ್ಕಿಂತಲೂ ಆಕೆ ಹೆಚ್ಚು ಮತ ಪಡೆದು ಆಯ್ಕೆಯಾದರು.
ಆಕ್ಸ್‌ಫರ್ಡ್ ವಿವಿಯ ಲಿನಾಕ್ರಿ ಕಾಲೇಜಿನಲ್ಲಿ ಎನರ್ಜಿ ಸಿಸ್ಟಮ್ ವಿಷಯದ ಎಂಎಸ್ಸಿ ಪದವಿಗಾಗಿ ಓದುತ್ತಿರುವ ರಶ್ಮಿ ಸಾಮಂತ್, ನಾಲ್ಕು ಮುಖ್ಯ ಆದ್ಯತೆಗಳೊಂದಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಸ್ವಯಂಮಾಡಳಿತ ಮತ್ತು ಎಲ್ಲರ ಒಳಗೊಳ್ಳುವಿಕೆ, ಎಲ್ಲರಿಗೂ ಕೋವಿಡ್ ರಕ್ಷಣೆ, ಗುಣಮಟ್ಟದ ಮಾನಸಿಕ ಆರೋಗ್ಯ ಸಂಪನ್ಮೂಲ ಲಭ್ಯತೆ ಹಾಗೂ ವಿವಿ ಕ್ಯಾಂಪಸ್‌ನ್ನು ಇಂಗಾಲದಿಂದ ಮುಕ್ತಗೊಳಿಸುವುದು.
ಈ ಚುನಾವಣೆಯಲ್ಲಿ 4,881 ವಿದ್ಯಾರ್ಥಿಗಳು ಒಟ್ಟು 36,405 ಮತಗಳನ್ನು ಚಲಾಯಿಸಿದ್ದು, ವಿವಿ ಇತಿಹಾಸದಲ್ಲಿ ಇದೊಂದು ಅತ್ಯಧಿಕ ಮತದಾನದ ದಾಖಲೆ ಎನಿಸಿಕೊಂಡಿದೆ. ಅಧ್ಯಕ್ಷ ಸ್ಥಾನಕ್ಕೆ ಬಿದ್ದ 3,708 ಮತಗಳಲ್ಲಿ ಸಾಮಂತ್ 1966ನ್ನು ಪಡೆದು ಭರ್ಜರಿ ಜಯ ದಾಖಲಿಸಿದರು.
ರಶ್ಮಿ ಸಾಮಂತ್ ತನ್ನ ಪ್ರಣಾಳಿಕೆಯಲ್ಲಿ, ಆಕ್ಸ್‌ಫರ್ಡ್ ವಿವಿ ಹಾಗೂ ಎಲ್ಲಾ ಸಂಬಂಧಪಟ್ಟ ಕಾಲೇಜುಗಳಲ್ಲಿರುವ ಸಾಮ್ರಾಜ್ಯಶಾಹಿಗಳ ಪ್ರತಿಮೆಗಳನ್ನು ತೆಗೆಸುವ ಬಗ್ಗೆ ವಿಶೇಷ ಪ್ರಯತ್ನ ನಡೆಸುವ, ಡಬ್ಲುಎಚ್‌ಓ ವಿಶ್ವದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ಕೊನೆಗೊಂಡಿದೆ ಎಂದು ಘೋಷಿಸುವ ತನಕ ವಿದ್ಯಾರ್ಥಿಗಳ ವಸತಿಗೆ ಸಂಬಂಧಿಸಿದ ಅಗತ್ಯತೆಗಳಿಗೆ ರಿಯಾಯಿತಿ ನೀಡುವ ಬಗ್ಗೆ ಪ್ರಯತ್ನಿಸುವ, ಕಾಲೇಜುಗಳಲ್ಲಿ ಪಳೆಯುಳಿಕೆ ಇಂಧನದ ಬಳಕೆಯನ್ನು ನಿಲ್ಲಿಸುವ ಪ್ರಯತ್ನಿಸುವ ಭರವಸೆಯನ್ನೂ ನೀಡಿದ್ದರು.
ಪರಿಚಯ: ರಸ್ಮಿ ಸಾಮಂತ್ ಅವರು ಮಣಿಪಾಲದ ದಿನೇಶ್ ಸಾಮಂತ್ ಹಾಗೂ ವತ್ಸಲಾ ಸಾಮಂತರ ಪುತ್ರಿ. ಮಣಿಪಾಲ ಮತ್ತು ಉಡುಪಿಗಳಲ್ಲಿ ತನ್ನ ಆರಂಭಿಕ ಶಿಕ್ಷಣವನ್ನು ಪಡೆದ ಅವರು 2016-2020ರ ಅವಧಿಯಲ್ಲಿ ಎಂಐಟಿಯಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. ಇಲ್ಲಿ ಕಲಿಯುತ್ತಿರುವಾಗಲೇ ತನ್ನ ನಾಯಕತ್ವ ಗುಣವನ್ನು ಪ್ರದರ್ಶಿಸಿದ್ದ ಅವರು ಎಂಐಟಿ ವಿದ್ಯಾರ್ಥಿ ಸಂಘದಲ್ಲಿ ತಾಂತ್ರಿಕ ಕಾರ್ಯದರ್ಶಿಯಾಗಿದ್ದರು. ಆಕೆಯ ಪ್ರಯತ್ನದಿಂದ ಎಂಐಟಿಯಲ್ಲಿ ಮಣಿಪಾಲ ಹ್ಯಾಕಥಾನ್ ಎಂಬ ಕಾರ್ಯಕ್ರಮ ಪ್ರಾರಂಭಗೊಂಡಿತ್ತು ಎಂದು ಮಾಹೆ ನೀಡಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.







