ಉದ್ಯಮಶೀಲತೆಯ ಸಂಸ್ಕೃತಿಯನ್ನು ಬೆಳೆಸಿ: ಟಿ.ವಿ.ಮೋಹನ್ದಾಸ್ ಪೈ
ಮಣಿಪಾಲ, ಫೆ.12: ಕರಾವಳಿ ಕರ್ನಾಟಕದ ಉದ್ಯಮಶೀಲ ವ್ಯವಸ್ಥೆಯನ್ನು ಉತ್ತೇಜಿಸುವ ಉದ್ಯಮಶೀಲತೆಯ ಸಂಸ್ಕೃತಿಯನ್ನು ಬೆಳೆಸುವ ಅಗತ್ಯವಿದೆ ಎಂದು ಮಣಿಪಾಲ್ ಗ್ಲೋಬಲ್ ಎಜುಕೇಶನ್ ಸರ್ವೀಸಸ್ ಅಧ್ಯಕ್ಷ, ಟಿ ವಿ ಮೋಹನ್ದಾಸ್ ಪೈ ಸಲಹೆ ನೀಡಿದ್ದಾರೆ.
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ), ಮಂಗಳೂರು ವಿವಿ, ಎನ್‌ಐಟಿಕೆ ಸುರತ್ಕಲ್, ನಿಟ್ಟೆ ವಿವಿ, ಯೆನಪೊಯ ವಿವಿ, ಶ್ರೀನಿವಾಸ ವಿವಿ, ಸಿಐಐ ಮಂಗಳೂರು ಚಾಪ್ಟರ್ ಹಾಗೂ ಐಕೆಪಿ ಸಂಯುಕ್ತವಾಗಿ ‘ಕರಾವಳಿ ಕರ್ನಾಟಕದಲ್ಲಿ ಉದ್ಯಮಶೀಲತಾ ಪರಿಸರಕ್ಕೆ ಉತ್ತೇಜನ’ ಎಂಬ ವಿಷಯದ ಮೇಲೆ ಶುಕ್ರವಾರ ಆಯೋಜಿ ಸಿದ್ದ ವರ್ಚುವಲ್ ವಿಚಾರಗೋಷ್ಠಿಯಲ್ಲಿ ಅವರು ದಿಕ್ಸೂಚಿ ಭಾಷಣ ಮಾಡುತ್ತಿದ್ದರು.
ಇಂದಿನ ಯುವಕರು ಸಾಕಷ್ಟು ಸಾಮರ್ಥ್ಯವನ್ನು ಹೊಂದಿದ್ದು, ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ತೆಗೆದುಕೊಳ್ಳಲು ಅವರನ್ನು ಪ್ರೋತ್ಸಾಹಿಸಬೇಕು. ಉತ್ತಮ ಸಂಸ್ಥೆಗಳ ಯಶಸ್ವಿ ಸಂಸ್ಥಾಪಕರೊಂದಿಗೆ ಸಂವಾದಾತ್ಮಕ ಸರಣಿಯನ್ನು ಆಯೋಜಿಸುವ ಮೂಲಕ ಈ ಯುವಕರಿಗೆ ಸ್ಫೂರ್ತಿ ಸಿಗುವಂತಾಗಬೇಕು ಎಂದವರು ಅಭಿಪ್ರಾಯ ಪಟ್ಟಿದ್ದಾರೆ.
ವಿಶ್ವವಿದಾಲಯಗಳು ಕೋರ್ಸ್‌ಗಳಲ್ಲಿ ಉತ್ತಮ ಗುಣಮಟ್ಟದ ಕೌಶಲ್ಯಗಳನ್ನು ಬೆಳೆಸುವತ್ತ ಗಮನ ಹರಿಸಬೇಕಾಗಿದೆ. ಉದ್ಯಮಶೀಲ ವ್ಯವಸ್ಥೆಯನ್ನು ಬಲಪಡಿಸಲು, ಉದ್ಯಮಿಗಳು ಮತ್ತು ಇತರ ಪಾಲುದಾರರನ್ನು ಒಳಗೊಂಡ ಸಾಮಾನ್ಯ ವೇದಿಕೆಯನ್ನು ಅಭಿವೃದ್ಧಿಪಡಿಸಬೇಕು. ಈ ಕ್ರಮಗಳ ರಚನಾತ್ಮಕ ಅನುಷ್ಠಾನವು ಮುಂದಿನ 10 ವರ್ಷಗಳಲ್ಲಿ ಕರಾವಳಿ ಕರ್ನಾಟಕದಿಂದ 10ಕ್ಕೂ ಅಧಿಕ ಹೆಚ್ಚು ಯುನಿಕಾರ್ನ್‌ಗಳಿಗೆ ಕಾರಣವಾಗುತ್ತದೆ ಎಂದವರು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಣಿಪಾಲ ಮಾಹೆ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್ ಮಾತನಾಡಿ, ವಿಶ್ವವಿದ್ಯಾಲಯದ ಎಲ್ಲೆಯನ್ನು ಮೀರಿ ಉದ್ಯಮಶೀಲ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಪ್ರಾದೇಶಿಕ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಬಹುದು. ಮನೆಯಲ್ಲಿ ಮತ್ತು ಶಾಲಾ ಹಂತದಲ್ಲೂ ಉದ್ಯಮಶೀಲತೆಗೆ ಪ್ರೋತ್ಸಾಹ ನೀಡುವ ಬಗ್ಗೆ ಕರೆ ನೀಡಿದರಲ್ಲದೆ ಪ್ರಾದೇಶಿಕ ಮಟ್ಟದಲ್ಲಿ ವಾರ್ಷಿಕ ತಂತ್ರಜ್ಞಾನ ಮತ್ತು ಉದ್ಯಮಶೀಲತೆ ಕಾರ್ಯಕ್ರಮವನ್ನು ನಡೆಸಲು ಸಲಹೆ ನೀಡಿದರು.
ವಿವಿಧ ಪ್ರಾದೇಶಿಕ ವಿಶ್ವವಿದ್ಯಾಲಯಗಳ ಕುಲಪತಿಗಳು, ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಮಂಗಳೂರು ಚಾಫ್ಟರ್‌ನ ಅಧ್ಯಕ್ಷ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳ ಪ್ರತಿನಿಧಿಗಳು, ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ ಶಿಕ್ಷಣ ಕಾರ್ಯಕ್ರಮ ಹಾಗೂ ಬಿಸಿನೆಸ್ ಇನ್‌ಕ್ಯುಬೇಟರ್ ಅಸೋಸಿಯೇಷನ್ (ಐಎಸ್‌ಬಿಎ) ಅಧ್ಯಕ್ಷರು, ಪ್ರಮುಖ ಕಂಪನಿಗಳ ಸಹಸಂಸ್ಥಾಪಕರು ಮತ್ತು ಇನ್‌ಕ್ಯುಬೇಟರ್‌ಗಳ ಸಿಇಒಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು, ಉದ್ಯಮಿಗಳು, ಸ್ಟಾರ್ಟಪ್ ಮತ್ತು ಉದ್ಯಮ ವೃತ್ತಿಪರರು ಭಾಗವಹಿಸಿದ್ದರು.







