ಚೆಕ್ ಬೌನ್ಸ್ ಪ್ರಕರಣ: ಜಾಮೀನು ಪಡೆದ ನಟಿ ಪದ್ಮಜಾ ರಾವ್

ಮಂಗಳೂರು, ಫೆ.12: ಚೆಕ್ ಬೌನ್ಸ್ ಪ್ರಕರಣದಲ್ಲಿ ಬಂಧನ ವಾರಂಟ್ ಜಾರಿಯಾಗಿದ್ದ ಕನ್ನಡದ ಹಿರಿಯ ನಟಿ ಪದ್ಮಜಾ ರಾವ್ ಶುಕ್ರವಾರ ಮಂಗಳೂರಿನ ನ್ಯಾಯಾಲಯದಲ್ಲೇ ಜಾಮೀನು ಪಡೆದಿದ್ದಾರೆ.
ಪದ್ಮಜಾ ರಾವ್ ಅವರನ್ನು ಬಂಧಿಸಿ ಕರೆ ತರುವಂತೆ ಮಂಗಳೂರಿನ ನ್ಯಾಯಾಲಯ ಬೆಂಗಳೂರಿನ ತಲಘಟ್ಟಪುರ ಪೊಲೀಸರ ಮೂಲಕ ವಾರಂಟ್ ಜಾರಿ ಮಾಡಿತ್ತು. ಅದರಂತೆ ಪೊಲೀಸರು ಅವರನ್ನು ಬಂಧಿಸಿ ಮಾ.8ರಂದು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿತ್ತು. ಆದರೆ ಪದ್ಮಜಾ ವಾರಂಟ್ ಆದೇಶದ ಪ್ರತಿ ಸಿಗುತ್ತಿದ್ದಂತೆ ತಮ್ಮ ವಕೀಲರ ಮೂಲಕ ಮಂಗಳೂರಿನ 5ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಆಗಮಿಸಿ ನ್ಯಾಯಾಧೀಶರ ಮುಂದೆ ಹಾಜರಾಗಿ, ಬಾಂಡ್ ಆಧಾರದಲ್ಲಿ ಜಾಮೀನು ಪಡೆದಿದ್ದಾರೆ.
‘ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇದೆ. ನನ್ನ ಮೇಲೆಯೂ ನನಗೆ ಭರವಸೆ ಇದೆ. ಹಾಗಾಗಿ ಈ ಪ್ರಕರಣದಲ್ಲಿ ಗೆದ್ದೇ ಗೆಲ್ಲುತ್ತೇನೆ. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಹೆಚ್ಚೇನು ಹೇಳುವಂತಿಲ್ಲ’ ಎಂದು ಪದ್ಮಜಾ ರಾವ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪದ್ಮಜಾ 2018ರಿಂದ ಹಂತ ಹಂತವಾಗಿ ತನ್ನಿಂದ ಸುಮಾರು 40 ಲಕ್ಷ ರೂ. ಪಡೆದು ವಂಚಿಸಿದ್ದಾರೆ ಎಂದು ತುಳು ಚಿತ್ರ ನಿರ್ದೇಶಕ ವೀರೇಂದ್ರ ಶೆಟ್ಟಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಹಣವನ್ನು ವೀರು ಟಾಕೀಸ್ ಪ್ರೊಡಕ್ಷನ್ ಹೌಸ್ ಹೆಸರಿನಲ್ಲಿ ಚೆಕ್ ಮೂಲಕ ನೀಡಿದ್ದಾಗಿ ವೀರೇಂದ್ರ ತಿಳಿಸಿದ್ದರು.







