ವಾರಾಹಿ ನದಿಯಲ್ಲಿ ಅಕ್ರಮ ಮರಳುಗಾರಿಕೆ: ನಾಲ್ಕು ದೋಣಿಗಳು ವಶ

ಕುಂದಾಪುರ, ಫೆ.12: ಕುಂದಾಪುರ ತಾಲೂಕಿನ ನಾನ್ ಸಿಆರ್ಝೆಡ್ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸಲಾಗುತ್ತಿದ್ದ ನಾಲ್ಕು ದೊಡ್ಡ ದೋಣಿಗಳನ್ನು ಗಣಿ ಇಲಾಖೆ ಅಧಿಕಾರಿಗಳ ತಂಡ ಇಂದು ದಾಳಿ ನಡೆಸಿ ವಶಪಡಿಸಿಕೊಂಡಿದೆ.
ಮೊಳಹಳ್ಳಿ, ಮರತೂರು, ಕೈಲ್ಕೇರಿ, ಕೋಣೆಹಾರ ಭಾಗದ ವಾರಾಹಿ ನದಿಯಲ್ಲಿ ಟನ್‌ಗಟ್ಟಲೇ ಮರಳನ್ನು ಬಗೆದು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಗಣಿ ಇಲಾಖೆ ಹಿರಿಯ ಭೂ ವಿಜ್ಞಾನಿ ಸಂದೀಪ್ ಮತ್ತು ಭೂ ವಿಜ್ಞಾನಿ ಗೌತಮ್ ಶಾಸ್ತ್ರಿ ನೇತೃತ್ವದ ತಂಡ ಉಡುಪಿಯಿಂದ ಬೋಟ್ ಮತ್ತು ಕ್ರೇನ್ ತೆಗೆದುಕೊಂಡು ಹೋಗಿ ಶುಕ್ರವಾರ ಬೆಳಗ್ಗೆ ಕಾರ್ಯಚರಣೆ ನಡೆಸಿದೆ.
ಈ ವೇಳೆ ನಾಲ್ಕು ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಧಿಕಾರಿಗಳ ದಾಳಿ ಮಾಹಿತಿ ಪಡೆದ ಆರೋಪಿಗಳ ತಂಡ ಎರಡು ದೋಣಿಗಳನ್ನು ನೀರಿನಲ್ಲಿ ಮುಳುಗಿಸಿ ಪರಾರಿಯಾಗಿದೆ ಎಂದು ತಿಳಿದು ಬಂದಿದೆ. ಈ ಭಾಗದಲ್ಲಿ ರಾತ್ರಿ ಭಾಗದಲ್ಲಿ ಅಕ್ರಮ ಮರಳುಗಾರಿಕೆ ಹೆಚ್ಚಿದ್ದ ಬಗ್ಗೆ ಸಾರ್ವಜನಿಕರು ದೂರಿದ್ದಾರೆ. ವಶಪಡಿಸಿಕೊಂಡ ದೋಣಿಗಳನ್ನು ಮೊಳಹಳ್ಳಿ ಗ್ರಾಮ ಪಂಚಾಯತ್‌ಗೆ ಹಸ್ತಾಂತರಿಸಲಾಗಿದ್ದು, ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.










