ಸ್ಪಾಮರ್‌ಗಳಿಂದ ಅಶ್ಲೀಲ ಪೋಸ್ಟ್‌ಗಳ ಬಳಿಕ ಹತ್ತೇ ನಿಮಿಷಗಳಲ್ಲಿ ಇಜಿಐ ವೆಬಿನಾರ್ ರದ್ದು

ಹೊಸದಿಲ್ಲಿ,ಫೆ.12: ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ (ಇಜಿಐ) ಶುಕ್ರವಾರ ಆಯೋಜಿಸಿದ್ದ ಆನ್‌ಲೈನ್ ವಿಚಾರ ಸಂಕಿರಣವನ್ನು ಹಲವಾರು ಸ್ಪಾಮರ್‌ಗಳು (ಅನಪೇಕ್ಷಿತ ಸಂದೇಶಗಳನ್ನು ರವಾನಿಸುವವರು) ಅಶ್ಲೀಲ ವೀಡಿಯೊಗಳು ಮತ್ತು ಸಂದೇಶಗಳನ್ನು ಪೋಸ್ಟ್ ಮಾಡಲು ಆರಂಭಿಸಿದ ಬಳಿಕ ಹತ್ತೇ ನಿಮಿಷಗಳಲ್ಲಿ ರದ್ದುಗೊಳಿಸಲಾಯಿತು.
‘ರಿಪೋರ್ಟಿಂಗ್ ಫ್ರಮ್ ರೆಡ್ ರೆನ್ಸ್ ’ ವಿಚಾರ ಸಂಕಿರಣವನ್ನು ನಕ್ಸಲ್ ಪೀಡಿತ ಪ್ರದೇಶಗಳಿಂದ ವರದಿ ಮಾಡುವವರ ಅನುಭವಗಳನ್ನು ಚರ್ಚಿಸಲು ಶುಕ್ರವಾರ ಮಧ್ಯಾಹ್ನ ಮೂರು ಗಂಟೆಗೆ ವಿಚಾರ ಸಂಕಿರಣ ಆಯೋಜಿಸಲಾಗಿತ್ತು. ಪತ್ರಕರ್ತರಾದ ಮಾಲಿನಿ ಸುಬ್ರಮಣಿಯಂ, ಪಿ.ವಿ.ಕೊಂಡಾಲ ರಾವ್,ಮಿಲಿಂದ ಉಮರೆ,ತಾಮೇಶ್ವರ ಸಿನ್ಹಾ, ಫೈಝಲ್ ಅನುರಾಗ್ ಮತ್ತು ಪೂರ್ಣಿಮಾ ತ್ರಿಪಾಠಿ ಭಾಷಣಕಾರರಲ್ಲಿ ಒಳಗೊಂಡಿದ್ದರು ಎಂದು ಇಜಿಐ ಹೇಳಿಕೆಯಲ್ಲಿ ತಿಳಿಸಿದೆ.
ವಿಚಾರ ಸಂಕಿರಣ ಆರಂಭಗೊಂಡ ಐದೇ ನಿಮಿಷಗಳಲ್ಲಿ ಭಾಷಣಗಳಿಗೆ ಅವಕಾಶ ನೀಡದಿರಲು ಬಯಸಿದ್ದ ಹಲವಾರು ಸ್ಪಾಮರ್‌ಗಳು ಸಭೆಗೆ ಸೇರಿಕೊಂಡಿದ್ದರು ಮತ್ತು ನಿರಂತರ ವ್ಯತ್ಯಯಗಳನ್ನುಂಟು ಮಾಡಲು ಆರಂಭಿಸಿದ್ದರು. ಕೆಲವರು ಕ್ಷುಲ್ಲಕ ಹಾಡುಗಳ ವೀಡಿಯೊಗಳನ್ನು ಪೋಸ್ಟ್ ಮಾಡತೊಡಗಿದ್ದರು. ಇಂತಹ ಪ್ರತಿ ಸ್ಪಾಮರ್‌ನ ವಿಂಡೋ ಮುಚ್ಚಲು ಕಾರ್ಯಕ್ರಮದ ಆಯೋಜಕರು ಪ್ರಯತ್ನಿಸಿದ್ದರು,ಆದರೆ ಸ್ಪಾಮರ್‌ಗಳ ಸಂಖ್ಯೆ ಹೆಚ್ಚುತ್ತಲೇ ಇತ್ತು. ಶೀಘ್ರ ಸ್ಪಾಮರ್‌ಗಳು ಅಶ್ಲೀಲ ವೀಡಿಯೊಗಳು ಮತ್ತು ನಿಂದನೆಗಳನ್ನು ಪೋಸ್ಟ್ ಮಾಡತೊಡಗಿದ್ದರು. ಅಂತಿಮವಾಗಿ ಯಾವುದೇ ಭಾಷಣ ನಡೆಯದೆ ಕಾರ್ಯಕ್ರಮವನ್ನು ರದ್ದುಗೊಳಿಸಬೇಕಾಯಿತು ಎಂದು ಅದು ಹೇಳಿದೆ.
ವಾಕ್‌ಸ್ವಾತಂತ್ರ್ಯದ ಮೇಲೆ ಹಿಂದೆಂದೂ ನಡೆದಿರದ ಇಂತಹ ರಾಜಾರೋಷ ದಾಳಿಯು ತನಗೆ ಆಘಾತವನ್ನುಂಟು ಮಾಡಿದೆ ಎಂದಿರುವ ಇಜಿಐ,ನಕ್ಸಲ್ ಪೀಡಿತ ಪ್ರದೇಶಗಳು ಸರಕಾರದ ಅತಿರೇಕಗಳ ಕೆಲವು ಅತ್ಯಂತ ಭೀಕರ ಮತ್ತು ಕ್ರೂರ ಘಟನೆಗಳಿಗೆ ಸಾಕ್ಷಿಯಾಗಿವೆ. ವೆಬಿನಾರ್‌ನ ಭಾಷಣಕಾರರು ಕಳೆದ ಕೆಲವು ದಶಕಗಳಲ್ಲಿ ಸಂಘರ್ಷ ಮತ್ತು ಮಾನವ ಹಕ್ಕುಗಳ ವರದಿಗಾರಿಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದಿದೆ.
ವಾಕ್ ಸ್ವಾತಂತ್ರ್ಯದ ಮೇಲಿನ ಈ ದಾಳಿಯ ಬಗ್ಗೆ ತನಿಖೆ ನಡೆಸುವಂತೆ ಮತ್ತು ಸೈಬರ್ ದಾಳಿಕೋರರ ವಿರುದ್ಧ ಪ್ರಕರಣ ದಾಖಲಿಸುವಂತೆ ಸೈಬರ್ ಅಪರಾಧ ಘಟಕವನ್ನು ಅದು ಆಗ್ರಹಿಸಿದೆ.







