ಉತ್ತರಾಖಂಡದ ಹಿಮಾಪಾತದಿಂದ ಅಪಾಯಕಾರಿ ಸರೋವರ ಸೃಷ್ಟಿ: ಉಪಗ್ರಹ ಚಿತ್ರದಲ್ಲಿ ದಾಖಲು

ಹೊಸದಿಲ್ಲಿ, ಫೆ. 12: ಹನ್ನೆರಡಕ್ಕೂ ಅಧಿಕ ಜನರು ಸಾವನ್ನಪ್ಪಲು ಹಾಗೂ ಇನ್ನೂರಕ್ಕೂ ಅಧಿಕ ಜನರು ನಾಪತ್ತೆಯಾಗಲು ಕಾರಣವಾದ ಹಿಮಪಾತದ ಅವಶೇಷಗಳ ಅಡಿಯಲ್ಲಿ ಸೃಷ್ಟಿಯಾಗಿರುವ ಅಪಾಯಕಾರಿ ಸರೋವರವನ್ನು ಅತ್ಯಧಿಕ ರೆಸಲ್ಯೂಷನ್‌ನ ಉಪಗ್ರಹ ಛಾಯಾಚಿತ್ರ ರವಿವಾರ ನಿಖರವಾಗಿ ಗುರುತಿಸಿದೆ.
ಸರೋವರದ ನೀರು ಬಿರುಕಿನ ಮೂಲಕ ರಬಸವಾಗಿ ಹೊರ ಹರಿಯುವುದರಿಂದ ಉಂಟಾಗುವ ಇನ್ನೊಂದು ದುರಂತವನ್ನು ತಪ್ಪಿಸಲು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ರಾಷ್ಟ್ರೀಯ ವಿಪತ್ತು ಪ್ರತಿಸ್ಪಂದನಾ ಪಡೆ (ಎನ್‌ಡಿಆರ್‌ಎಫ್) ಹಾಗೂ ಇತರ ಸಂಘಟನೆಗಳ ವಿಜ್ಞಾನಿಗಳು ಯೋಜನೆ ಯೊಂದನ್ನು ರೂಪಿಸುತ್ತಿದ್ದಾರೆ. ‘‘ಈ ವಿಷಯದ ಬಗ್ಗೆ ಗಮನ ಹರಿಸಲಾಗಿದೆ.
ಪರಿಸ್ಥಿತಿ ಅಂದಾಜಿಸಲು ಹಾಗೂ ಪರಿಶೀಲಿಸಲು ತಂಡಗಳು ಈಗಾಗಲೇ ತೆರಳಿವೆ. ಇದಕ್ಕಿಂತ ಮೊದಲು ತಂಡ ಈ ಪ್ರದೇಶದಲ್ಲಿ ವಿಮಾನಗಳ ಮೂಲಕ ಹಾರಾಡಿ ಪರಿಶೀಲನೆ ನಡೆಸಿವೆ. ಡ್ರೋನ್, ಮಾನವ ರಹಿತ ವಿಮಾನಗಳು, ಪಾಲುದಾರ ಏಜೆನ್ಸಿಗಳು ಅಲ್ಲಿನ ನಿಖರ ಪರಿಸ್ಥಿತಿಯನ್ನು ಅವಲೋಕನ ನಡೆಸಿವೆ’’ ಎಂದು ಎನ್‌ಡಿಆರ್‌ಎಫ್‌ನ ಪ್ರಧಾನ ನಿರ್ದೇಶಕ ಎಸ್.ಎನ್. ಪ್ರಧಾನ್ ಹೇಳಿದ್ದಾರೆ. ಅಲ್ಲಿ ನಡೆಯುತ್ತಿರುವುದನ್ನು ಗಮನಿಸಲು, ಅಂದಾಜಿಸಲು ಹಾಗೂ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ನಾವು ಈ ಕೆಲಸದಲ್ಲಿ ತೊಡಗಿಕೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ. ವೇಗವಾಗಿ ಹರಿಯುವ ರೋಂಟಿ ನದಿಯಿಂದ ನೀರು ಪಡೆಯುವ ಋಷಿ ಗಂಗಾ ನದಿಯಲ್ಲಿ ತಡೆಗಳನ್ನು ಉಪಗ್ರಹ ಚಿತ್ರ ಗುರುತಿಸಿದೆ. ಫೆಬ್ರವರಿ 7ರಂದು ಸಂಭವಿಸಿದ ಹಿಮಪಾತದಿಂದ ಪ್ರವಾಹ ಹಾಗೂ ಅವಶೇಷಗಳಿಂದ ತೀವ್ರ ಹಾನಿಯಾಗಿರುವ ತಪೋವನ್ ಜಲ ವಿದ್ಯುತ್ ಘಟಕದತ್ತ ಋಷಿಗಂಗಾ ನದಿ ಹರಿಯುತ್ತಿರುವುದು ಕಂಡು ಬಂದಿದೆ. ನಾವು ಸರೋವರದ ಉದ್ದ ಹಾಗೂ ಅಗಲಗಳನ್ನು, ಅವಶೇಷಗಳ ಗೋಡೆಗಳನ್ನು ಅಂದಾಜಿಸುತ್ತಿದ್ದೇವೆ. ಇದನ್ನೆಲ್ಲ ಪರಿಶೀಲಿಸಿದ ಬಳಿಕ ಮಾನದಂಡಗಳಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಲಿದ್ದೇವೆ ಎಂದು ಎನ್‌ಡಿಆರ್‌ಎಫ್‌ನ ಅಧಿಕಾರಿ ತಿಳಿಸಿದ್ದಾರೆ.
ವಿಪತ್ತಿನ ಬಳಿಕ ಪರಿಸ್ಥಿತಿ ಅವಲೋಕಿಸಲು ಸ್ಥಳಕ್ಕೆ ತೆರಳಿದ್ದ ಗರ್ವಾಲ್ ವಿಶ್ವವಿದ್ಯಾನಿಲಯದ ವೈ.ಪಿ. ಸಂಡ್ರಿಯಲ್, ಸರೋವರ ರೂಪುಗೊಂಡಿರುವುದು ಚಿಂತೆಗೆ ಕಾರಣವಾಗುವ ವಿಚಾರ ಎಂದಿದ್ದಾರೆ.







