ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮ
ಉಡುಪಿ, ಫೆ.12:ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಯ ಸೇವಾ ಶುಲ್ಕ ಹಾಗೂ ಘನತ್ಯಾಜ್ಯ ವಸ್ತು ನಿರ್ವಹಣಾ ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ದಂಡ/ಜುಲ್ಮಾನೆಗಳನ್ನು ವಿಧಿಸಲಾಗುತ್ತಿದ್ದು, ಮನೆ, ವಾಣಿಜ್ಯ ಮಳಿಗೆ ಹಾಗೂ ಕಸ ಉತ್ಪಾದನೆ ಮಾಡುವವರು ಘನ ತ್ಯಾಜ್ಯ ವಸ್ತುಗಳನ್ನು ಹಸಿಕಸ, ಒಣಕಸ ಮತ್ತು ಅಪಾಯಕಾರಿ ಕಸವನ್ನು ಬೇರ್ಪಡಿಸಿ, ಪ್ರತ್ಯೇಕವಾಗಿ ಕಸ ಸಂಗ್ರಹಿಸುವ ನಗರಸಭೆಯ ವಾಹನಕ್ಕೆ ನೀಡುವುದು ಡ್ಡಾಯವಾಗಿದೆ.
ಸಾರ್ವಜನಿಕ ಸ್ಥಳದಲ್ಲಿ ಹಾಗೂ ಖಾಸಗಿ ಪ್ರದೇಶದಲ್ಲಿ ಕಸ ಹಾಕುವುದು/ ಕಸ ಎಸೆಯುವುದನ್ನು ನಿಷೇಧಿಸಲಾಗಿದ್ದು, ನಗರಸಭೆ ಸ್ವಚ್ಛತೆ ಕಾಪಾಡುವಲ್ಲಿ ಮುತುವರ್ಜಿ ವಹಿಸಿ ಸ್ವಚ್ಚನಗರವನ್ನಾಗಿಸಲು ನಗರದ ತ್ಯಾಜ್ಯ ಬೀಳುವ ಪ್ರದೇಶದಲ್ಲಿ ರಾತ್ರಿ ಮತ್ತು ಮುಂಜಾನೆ ಕಾವಲು ನಡೆಸಿ ತ್ಯಾಜ್ಯ ಹಾಕುವವರನ್ನು ಪತ್ತೆ ಹಚ್ಚಿ ದಂಡ ವಿಧಿಸುತ್ತಿದ್ದು, ಜನವರಿ ತಿಂಗಳಲ್ಲಿ 1,23,000 ರೂ ದಂಡ ವಸೂಲಿ ಮಾಡಲಾಗಿದೆ.
ಸಾರ್ವಜನಿಕರು, ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಹಾಕುವುದು ಕಂಡುಬಂದಲ್ಲಿ ಇನ್ನೂ ಹೆಚ್ಚಿನ ಕಠಿಣ ಕ್ರಮ ಕೈಗೊಳ್ಳಲು ಕ್ರಮವಹಿಸಲಾಗುವುದು. ಆದ್ದರಿಂದ ನಗರಸಭೆಯ ಸೂಚನೆಗಳನ್ನು ಪಾಲಿಸಿ, ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





