ವಲಸೆ ವ್ಯವಸ್ಥೆಗೆ ಅನುಕಂಪ, ಮಾನವೀಯತೆ ಮರಳಿಸುತ್ತೇವೆ: ಬೈಡನ್ ಸರಕಾರ ಘೋಷಣೆ

ವಾಶಿಂಗ್ಟನ್, ಫೆ. 12: ಅಮೆರಿಕದ ವಲಸೆ ವ್ಯವಸ್ಥೆಗೆ ‘ಅನುಕಂಪ ಮತ್ತು ಕ್ರಮ ಬದ್ಧತೆಯನ್ನು ಮರಳಿಸುವ’ ನಿಟ್ಟಿನಲ್ಲಿ ಅಧ್ಯಕ್ಷ ಜೋ ಬೈಡನ್ ಸ್ಪಷ್ಟ ನಿಲುವು ಹೊಂದಿದ್ದಾರೆ ಎಂದು ಅಧ್ಯಕ್ಷರ ಆಡಳಿತ ಕಚೇರಿ ಶ್ವೇತಭವನ ಗುರುವಾರ ಹೇಳಿದೆ ಹಾಗೂ ಕಳೆದ ಕೆಲವು ವಾರಗಳಲ್ಲಿ ಅವರು ಸಹಿ ಹಾಕಿರುವ ಸರಣಿ ಸರಕಾರಿ ಆದೇಶಗಳು ಈ ದಿಸೆಯಲ್ಲಿ ಆರಂಭ ಮಾತ್ರ ಎಂದಿದೆ.
‘‘ಅಧ್ಯಕ್ಷ ಜೋ ಬೈಡನ್ ಈವರೆಗೆ ಸಹಿ ಹಾಕಿರುವ ಸರಕಾರಿ ಆದೇಶಗಳು ಆರಂಭ ಮಾತ್ರ’’ ಎಂದು ಶ್ವೇತಭವನದ ವಕ್ತಾರರೊಬ್ಬರು ತಿಳಿಸಿದರು.
‘‘ಕಳೆದ ನಾಲ್ಕು ವರ್ಷಗಳಲ್ಲಿ ವಲಸೆ ವ್ಯವಸ್ಥೆಯಲ್ಲಿದ್ದ ವಿಭಾಜಕ, ಅಮಾನವೀಯ ಮತ್ತು ಅನೈತಿಕ ನೀತಿಗಳನ್ನು ಬೈಡನ್ ಸರಿಪಡಿಸಲಿದ್ದಾರೆ. ಮುಂದಿನ ವಾರಗಳು ಮತ್ತು ತಿಂಗಳುಗಳಲ್ಲಿ ಇದು ನಮ್ಮ ಆದ್ಯತೆಯ ವಿಷಯವಾಗಿರುತ್ತದೆ’’ ಎಂದು ವಕ್ತಾರರು ನುಡಿದರು.
ಅಮೆರಿಕದಲ್ಲಿ ಖಾಯಂ ಆಗಿ ವಾಸಿಸಲು ಅವಕಾಶ ಮಾಡಿಕೊಡುವ ಗ್ರೀನ್ ಕಾರ್ಡ್‌ಗಳ ವಿತರಣೆಯಲ್ಲಿ, ದೇಶಗಳಿಗೆ ಮಿತಿ ಹೇರುವ ತಾರತಮ್ಯಕಾರಿ ನೀತಿ ರದ್ದುಗೊಳ್ಳುವವರೆಗೆ ಭಾರತದಲ್ಲಿ ಜನಿಸಿರುವ ಯಾವುದೇ ವ್ಯಕ್ತಿಗೆ ಎಚ್-1ಬಿ ವೀಸಾ ವಿತರಿಸದಂತೆ ಭಾರತೀಯ-ಅವೆುರಿಕನ್ನರನ್ನು ಪ್ರತಿನಿಧಿಸುವ ವಲಸೆ ವಶೀಲಿ ಗುಂಪು ‘ಇಮಿಗ್ರೇಶನ್ ವಾಯ್ಸ್’ ಬೈಡನ್ ಸರಕಾರವನ್ನು ಒತ್ತಾಯಿಸಿತ್ತು.
ಈ ಕುರಿತ ಪ್ರಶ್ನೆಯೊಂದಕ್ಕೆ ಶ್ವೇತಭವನದ ವಕ್ತಾರರು ಉತ್ತರಿಸುತ್ತಿದ್ದರು.
ಆದರೆ, ಇಂಥ ಆದೇಶವೊಂದನ್ನು ಬೈಡನ್ ಸರಕಾರ ಹೊರಡಿಸುವುದೇ ಎನ್ನುವುದನ್ನು ಶ್ವೇತಭವನ ತಿಳಿಸಿಲ್ಲ. ಆದರೆ, ವಲಸೆ ವ್ಯವಸ್ಥೆಗೆ ಮಾನವೀಯತೆ ಮತ್ತು ಅನುಕಂಪವನ್ನು ಮರಳಿ ತರುವ ನಿಟ್ಟಿನಲ್ಲಿ ಸಮಗ್ರ ವಲಸೆ ಸುಧಾರಣೆಯನ್ನು ಜಾರಿಗೆ ತರುವುದಕ್ಕೆ ಸರಕಾರ ಬದ್ಧವಾಗಿದೆ ಎಂದು ಅದು ಹೇಳಿದೆ.