ಮನೆಗೆಲಸದವರನ್ನು ಅಸಂಘಟಿತ ಕಾರ್ಮಿಕರ ಕಾಯ್ದೆಯಡಿ ಪರಿಗಣಿಸಲು ಪಿಐಎಲ್: ಕೇಂದ್ರ, ರಾಜ್ಯಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು, ಫೆ.12: ರಾಜ್ಯದಲ್ಲಿರುವ ಮನೆಗೆಲಸದವರನ್ನು ಗುರುತಿಸಿ ಅವರನ್ನು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆ-2008ರ ಅಡಿ ನೋಂದಾಯಿಸಿ, ಕನಿಷ್ಠ ವೇತನ ಹಾಗೂ ಇತರೆ ಸೌಲಭ್ಯಗಳನ್ನು ಕಲ್ಪಿಸಲು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಮನೆ ಕೆಲಸಗಾರರ ಹಕ್ಕುಗಳ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ನೋಟಿಸ್ ಜಾರಿಗೊಳಿಸಿದೆ. ಅರ್ಜಿದಾರರ ಪರವಾಗಿ ವಕೀಲ ಕ್ಲಿಪ್ಟನ್ ರೊಜಾರಿಯೋ ಅವರು ವಾದಿಸಿದರು. ಅರ್ಜಿ ವಿಚಾರಣೆಯನ್ನು ನ್ಯಾಯಪೀಠವು ಮಾ.25ಕ್ಕೆ ಮುಂದೂಡಿತು.
ಅರ್ಜಿದಾರರ ಮನವಿ ಏನು: 2020ರ ಮಾ.23ರಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಪ್ರಕಟಿಸಿರುವ ವರದಿ ಪ್ರಕಾರ, ದೇಶದಲ್ಲಿ 39 ಲಕ್ಷ ಮನೆ ಕೆಲಸಗಾರರಿದ್ದಾರೆ. ಬೆಂಗಳೂರು ನಗರದಲ್ಲಿ 4 ಲಕ್ಷ ಮನೆ ಕೆಲಸದವರಿದ್ದು, ಇವರನ್ನು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆಯಡಿ ನೋಂದಣಿ ಮಾಡಿಲ್ಲ. ಇದರಿಂದಾಗಿ ಮನೆಗೆಲಸದವರಿಗೆ ಕನಿಷ್ಠ ವೇತನ ಸಿಗುತ್ತಿಲ್ಲ. ಜತೆಗೆ ಶೋಷಣೆ, ಲೈಂಗಿಕ ದೌರ್ಜನ್ಯ ಮತ್ತು ತಾರತಮ್ಯದಿಂದ ರಕ್ಷಣೆ ಇಲ್ಲದಂತಾಗಿದ್ದಾರೆ.
ಹೀಗಾಗಿ, ರಾಜ್ಯದಲ್ಲಿರುವ ಮನೆಗೆಲಸದವರನ್ನು ಗುರುತಿಸಿ ಅವರನ್ನು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆಯಡಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ಕಾಯ್ದೆ ನಿಯಮಗಳ ಪ್ರಕಾರ ಕಾರ್ಮಿಕರಿಗೆ ಕನಿಷ್ಠ ವೇತನ ಹಾಗೂ ಇತರೆ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ಮನೆಗೆಲಸದವರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ, ತಾರತಮ್ಯ, ಶೋಷಣೆ ಮತ್ತು ಒತ್ತಾಯಪೂರ್ವಕವಾಗಿ ಮನೆ ಕೆಲಸ ಮಾಡಿಸುವುದರಿಂದ ರಕ್ಷಣೆ ನೀಡಬೇಕು. ಕಾಯ್ದೆ ಕುರಿತು ವ್ಯಾಪಕ ಪ್ರಚಾರ ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.







