ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚರ್‌ಗೆ ಜಾಮೀನು

ಮುಂಬೈ, ಫೆ.12: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಐಸಿಐಸಿಐ ಬ್ಯಾಂಕ್‌ನ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಇಒ) ಚಂದಾ ಕೊಚ್ಚರ್‌ಗೆ ಮುಂಬೈಯ ನ್ಯಾಯಾಲಯ ಶುಕ್ರವಾರ ಜಾಮೀನು ಮಂಜೂರುಗೊಳಿಸಿದೆ.
ಚಂದಾ ಕೊಚ್ಚರ್ ಐಸಿಐಸಿಐ ಬ್ಯಾಂಕ್‌ನ ಸಿಇಒ ಆಗಿದ್ದಾಗ ಬ್ಯಾಂಕ್ ಮತ್ತು ವೀಡಿಯೊಕಾನ್ ಸಮೂಹಸಂಸ್ಥೆಗಳ ಮಧ್ಯೆ ನಡೆದ ಹಣ ಅಕ್ರಮ ವರ್ಗಾವಣೆ ಪ್ರಕರಣ ಇದಾಗಿದೆ. 5 ಲಕ್ಷ ರೂ. ಮುಚ್ಚಳಿಕೆ ಒದಗಿಸಬೇಕು ಹಾಗೂ ನ್ಯಾಯಾಲಯದ ಅನುಮತಿ ಪಡೆಯದೆ ದೇಶಬಿಟ್ಟು ತೆರಳಬಾರದು ಎಂಬ ಷರತ್ತಿನ ಮೇಲೆ ಜಾಮೀನು ಮಂಜೂರುಗೊಳಿಸಲಾಗಿದೆ.
ಜಾರಿ ನಿರ್ದೇಶನಾಲಯ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ 2019ರಲ್ಲಿ ಚಂದಾ ಕೊಚ್ಚರ್, ಅವರ ಪತಿ ದೀಪಕ್ ಕೊಚ್ಚರ್ ಹಾಗೂ ವೀಡಿಯೊಕಾನ್ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ವೇಣುಗೋಪಾಲ್ ಧೂತ್ ವಿರುದ್ಧ ಪ್ರಕರಣ ದಾಖಲಿಸಿದೆ. ಅಲ್ಲದೆ, ಚಂದಾ ಕೊಚ್ಚರ್ ಅಧಿಕಾರಾವಧಿಯಲ್ಲಿ ಐಸಿಐಸಿ ಬ್ಯಾಂಕ್ ನೀಡಿದ ಎರಡು ಸಾಲ ಪ್ರಕರಣಗಳ ಬಗ್ಗೆಯೂ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. 2018ರಲ್ಲಿ ಚಂದಾ ಕೊಚ್ಚರ್ ಹುದ್ದೆಗೆ ರಾಜೀನಾಮೆ ನೀಡಿದ್ದರು.





