ಬೆಲೆ ಏರಿಕೆ ಖಂಡಿಸಿ ಕಟ್ಟಡ ನಿರ್ಮಾಣ ಮಾಲಕರ ಪ್ರತಿಭಟನೆ
ಬೆಂಗಳೂರು, ಫೆ.12: ದಿನೇ ದಿನೇ ಏರಿಕೆಯಾಗುತ್ತಿರುವ ಸಿಮೆಂಟ್, ಸ್ಟೀಲ್ ಮತ್ತು ಕಟ್ಟಡ ನಿರ್ಮಾಣ ಸಾಮಗ್ರಿಗಳ ಬೆಲೆಗಳ ಏರಿಕೆ ಖಂಡಿಸಿ ಬಿಲ್ಡರ್ಸ್ ಅಸೋಸಿಯೇಷನ್ ಸದಸ್ಯರು ಪ್ರತಿಭಟನೆ ನಡೆಸಿದರು.
ಶುಕ್ರವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಾಮಗ್ರಿ ಮೇಲಿನ ತೆರಿಗೆ ತಗ್ಗಿಸಬೇಕು ಎಂದು ಒತ್ತಾಯ ಮಾಡಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಿಲ್ಡರ್ಸ್ ಅಸೋಸಿಯೇಷನ್ ಬೆಂಗಳೂರು ಶಾಖೆ ಅಧ್ಯಕ್ಷ ಜಿ.ಎಂ.ರವೀಂದ್ರ, ನಿಯಂತ್ರಣಕ್ಕೆ ಸರಕಾರ ಮುಂದಾಗದೆ ಇದ್ದಲ್ಲಿ ಕೃಷಿ ನಂತರ ಅತಿ ಹೆಚ್ಚು ಕೆಲಸಗಾರರನ್ನು ಹೊಂದಿರುವ ಕಟ್ಟಡ ನಿರ್ಮಾಣ ಕ್ಷೇತ್ರ ಅನಿವಾರ್ಯವಾಗಿ ನೇಪಥ್ಯಕ್ಕೆ ಸರಿಯಲಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಟ್ಟಡ ನಿರ್ಮಾಣ ಕ್ಷೇತ್ರ ದೇಶದ ಜಿಡಿಪಿಗೆ ಪ್ರಮುಖ ಕೊಡುಗೆ ನೀಡುತ್ತಿದೆ. 60 ಮಿಲಿಯನ್ ಕಾರ್ಮಿಕರನ್ನು ಹೊಂದಿರುವ ಈ ಕ್ಷೇತ್ರ ಕೃಷಿ ನಂತರ ಅತಿ ಹೆಚ್ಚು ಉದ್ಯೋಗಾವಕಾಶ ನೀಡಿರುವ ಕ್ಷೇತ್ರವಾಗಿದೆ. ಕಟ್ಟಡ ನಿರ್ಮಾಣಕ್ಕೆ ಪ್ರಮುಖ ಕಚ್ಚಾ ವಸ್ತುವಾಗಿ ಸಿಮೆಂಟ್ ಬಳಸಲಾಗುತ್ತದೆ. ಸಿಮೆಂಟ್ ಹಾಗೂ ಸ್ಟೀಲ್ ಕಟ್ಟಡ ಕಾಮಗಾರಿಯ ಅತ್ಯಂತ ಪ್ರಮುಖ ವಸ್ತುಗಳು. ಈ ವಸ್ತುಗಳ ಬೆಲೆಯನ್ನು ದಿನೇ ದಿನೇ ಹೆಚ್ಚಿಸಲಾಗುತ್ತಿದೆ ಎಂದರು.
ಸಿಮೆಂಟ್ ಉತ್ಪಾದಕರು ತಮ್ಮಲ್ಲೇ ತಂಡ ರಚಿಸಿಕೊಂಡು ಬೆಲೆ ಹೆಚ್ಚಿಸುತ್ತಿರುವ ಬಗ್ಗೆ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಕಾಂಪಿಟೇಷನ್ ಕಮಿಷನ್‍ಗೆ ದೂರು ನೀಡಿತ್ತು. ಇದರ ವಿಚಾರಣೆ ನಡೆಸಿದ ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾ ಬಿಲ್ಡರ್ಸ್ ಅಸೋಸಿಯೇಷನ್‍ಗೆ 6,307 ಕೊಟಿ ರೂ.ಗಳ ನಷ್ಟ ಭರಿಸಿಕೊಡುವಂತೆ ಆದೇಶ ನೀಡಿದೆ ಎಂದು ಹೇಳಿದರು.
ಕಾರ್ಯದರ್ಶಿ ಅಬ್ದುಲ್ ಸತ್ತಾರ್ ಮಾತನಾಡಿ, ಇನ್ಸುರೆನ್ಸ್ ಹಾಗೂ ಟೆಲಿಕಾಂ ರೆಗ್ಯುಲೇಟರಿ ಪ್ರಾಧಿಕಾರಗಳ ರೀತಿಯಲ್ಲಿ ಸಿಮೆಂಟ್ ಹಾಗೂ ಸ್ಟೀಲ್ ಬೆಲೆಗಳನ್ನು ನಿಯಂತ್ರಿಸುವ ಪ್ರಾಧಿಕಾರ ರಚನೆಯಾಗಬೇಕು. ಅನಿಯಂತ್ರಿತವಾಗಿ ಏರಿಕೆಯಾಗುತ್ತಿರುವ ಬೆಲೆಗಳನ್ನು ನಿಯಂತ್ರಿಸಲು ಪ್ರಾಧಿಕಾರದ ಅಗತ್ಯವಿದೆ ಹೇಳಿದರು.







