ಪುತ್ತೂರು ನಗರ ನೀರು ಸರಬರಾಜು ವ್ಯವಸ್ಥೆಯ ಕಿಂಡಿ ಅಣೆಕಟ್ಟಿಗೆ ಹಲಗೆಗಳ ಅಳವಡಿಕೆ ಪೂರ್ಣ

ಪುತ್ತೂರು: ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯಾದ ಉಪ್ಪಿನಂಗಡಿ ಬಳಿಯ ನೆಕ್ಕಿಲಾಡಿ ಗ್ರಾಮದ ಕುಮಾರಧಾರಾ ನದಿಗೆ ನಿರ್ಮಿಸಿರುವ ಕಿಂಡಿ ಅಣೆಕಟ್ಟಿನಲ್ಲಿ ನೀರು ಸಂಗ್ರಹಕ್ಕಾಗಿ ಹಲಗೆ ಜೋಡಣೆ ಪೂರ್ಣಗೊಂಡಿದ್ದು, ನಗರಸಭಾ ಅಧ್ಯಕ್ಷ, ಉಪಾಧ್ಯಕ್ಷರು, ಪೌರಾಯುಕ್ತರು ಕಿಂಡಿ ಅಣೆಕಟ್ಟು ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
12 ವರ್ಷಗಳ ಹಿಂದೆ ಕುಡ್ಸೆಂಪ್ ಯೋಜನೆಯಡಿ ನಿರ್ಮಿಸಿದ ಕಿಂಡಿ ಅಣೆಕಟ್ಟಿನಲ್ಲಿ ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ಅಣೆಕಟ್ಟಿನಲ್ಲಿ ನೀರು ಶೇಖರಣೆಗಾಗಿ ಹಲಗೆ ಜೋಡಣೆ ಮಾಡಲಾಗುತ್ತದೆ. ಈ ಬಾರಿ ಡ್ಯಾಮ್‌ನಲ್ಲಿ ನೀರಿನ ಅಭಾವ ತಲೆ ದೋರಿದ ಹಿನ್ನೆಲೆಯಲ್ಲಿ ತಕ್ಷಣ ಹಲಗೆ ಜೋಡಣೆ ಮಾಡಲು ಸೂಚಿಸಲಾಗಿತ್ತು. ಇದೀಗ ಹಲಗೆ ಜೋಡಣೆ ಪೂರ್ಣಗೊಂಡಿದೆ ಎಂದು ನಗರಸಭೆ ಅಧ್ಯಕ್ಷ ಕೆ. ಜೀವಂಧರ್ ಜೈನ್ ತಿಳಿಸಿದ್ದಾರೆ.
ಕುಮಾರಧಾರಾ ನದಿಗೆ ನಿರ್ಮಿಸಿರುವ ಕಿಂಡಿ ಅಣೆಕಟ್ಟಿನಲ್ಲಿ ಈಗಾಗಲೇ ಒಟ್ಟು 66 ಕಿಂಡಿಗಳಿಗೆ 396 ಹಲಗೆ ಜೋಡಣೆ ಮಾಡಲಾಗಿದೆ. ೨೧ ದಿನಗಳ ಮಾನವ ಶ್ರಮದಿಂದ ಈ ಕೆಲಸ ಕಾರ್ಯ ನಡೆಯುತ್ತದೆ. ಈಗಾಗಲೇ 630 ಎಮ್.ಎಲ್.ಡಿ ನೀರು ಸಂಗ್ರಹವಾಗಿದ್ದು, ಅಣೆಕಟ್ಟಿನಲ್ಲಿ ನೀರಿನ ಮಟ್ಟ ಭರ್ತಿಯಾಗಿ ಹೆಚ್ಚಾದ ನೀರು ಅಣೆಕಟ್ಟಿನ ಮೇಲ್ಭಾಗದಿಂದ ಹರಿಯುತ್ತಿದೆ. ಈ ಸಂದರ್ಭ ನಗರಸಭಾ ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ, ಪೌರಾಯುಕ್ತೆ ರೂಪಾ ಟಿ. ಶೆಟ್ಟಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅರುಣ್, ನೀರಿನ ವಿಭಾಗದ ಮುಖ್ಯಸ್ಥ ವಸಂತ್ ಸೇರಿದಂತೆ ಪಂಪ್‌ಹೌಸ್ ನಿರ್ವಾಹಕರು ಉಪಸ್ಥಿತರಿದ್ದರು.







