“ಕೋವಿಡ್ ಕಾರಣದಿಂದ ರಾಜ್ಯ ಸರಕಾರಕ್ಕೆ ಬಾಕಿ 11 ಕೋ. ರೂ. ಪಾವತಿ ಅಸಾಧ್ಯ”
ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಪದ್ಮನಾಭಸ್ವಾಮಿ ದೇವಾಲಯ

ಹೊಸದಿಲ್ಲಿ, ಫೆ. 12: ಕೋವಿಡ್ ಸಾಂಕ್ರಾಮಿಕ ರೋಗದ ಕಾರಣದಿಂದ ಕೇರಳ ಸರಕಾರಕ್ಕೆ ಭದ್ರತೆ ಹಾಗೂ ನಿರ್ವಹಣೆಗೆ ಸಂಬಂಧಿಸಿದ ವೆಚ್ಚಗಳ ಬಾಕಿ 11.7 ಕೋಟಿ ರೂಪಾಯಿ ಪಾವತಿಸಲು ಅಸಾಧ್ಯ ಎಂದು ತಿರುವನಂತಪುರಂನ ಪದ್ಮನಾಭಸ್ವಾಮಿ ದೇವಾಲಯದ ಆಡಳಿತ ಸಮಿತಿ ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ತಿಳಿಸಿದೆ.
ಕೋವಿಡ್ ಸಾಂಕ್ರಾಮಿಕ ರೋಗ ದೇಣಿಗೆ ಸಂಗ್ರಹದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ ಸಮಿತಿ, ಹಣ ಪಾವತಿಸಲು ಕಾಲಾವಕಾಶ ಕೋರಿತು. ತಿರುವಾಂಕೂರಿನ ರಾಜ ಕುಟುಂಬ ವ್ಯವಸ್ಥೆ ಮಾಡುವ ವರೆಗೆ ದೇವಾಲಯಕ್ಕೆ ಸಂಬಂಧಿಸಿದ ವ್ಯವಹಾರಗಳನ್ನು ನೋಡಿಕೊಳ್ಳಲು ಕಳೆದ ಜುಲೈಯಲ್ಲಿ ಸುಪ್ರೀಂ ಕೋರ್ಟ್ ಈ ಸಮಿತಿ ರೂಪಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ಯು.ಯು. ಲಲಿತ್ ಹಾಗೂ ಇಂದೂ ಮಲ್ಹೋತ್ರಾ ಅವರನ್ನು ಒಳಗೊಂಡ ದ್ವಿಸದಸ್ಯರ ಪೀಠ, ‘‘ಈ ಮನವಿಯನ್ನು ಸರಕಾರ (ಕೇರಳ) ಪರಿಶೀಲಿಸಲಿ’’ ಎಂದು ಹೇಳಿತು. ಅಲ್ಲದೆ, ಪ್ರಕರಣದ ಕುರಿತಂತೆ ಈ ಹಿಂದಿನ ಆದೇಶಗಳನ್ನು ಅನುಸರಿಸುವಂತೆ ಸ್ಪಷ್ಟವಾಗಿ ಸೂಚಿಸಿತು.
ಪದ್ಮನಾಭಸ್ವಾಮಿ ದೇವಾಲಯದ ಲೆಕ್ಕ ಪರಿಶೋಧನೆ ವರದಿಯನ್ನು ನ್ಯಾಯಾಲಯ ಸೆಪ್ಟಂಬರ್ ಮಧ್ಯಭಾಗದಲ್ಲಿ ಪರಿಶೀಲನೆ ನಡೆಸಲಿದೆ ಎಂದು ನ್ಯಾಯಾಲಯ ತಿಳಿಸಿದೆ.





