ಕುಸ್ತಿ ಅಖಾಡದಲ್ಲಿ ಗುಂಡಿನ ದಾಳಿ: ಐವರು ಮೃತ್ಯು, ಇಬ್ಬರಿಗೆ ಗಾಯ

ಹೊಸದಿಲ್ಲಿ: ಹರ್ಯಾಣದ ರೋಹ್ಟಕ್ ನ ಕುಸ್ತಿ ಅಖಾಡದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಐವರು ಸಾವನ್ನಪ್ಪಿದ್ದು, ಇತರ ಇಬ್ಬರು ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಶುಕ್ರವಾರ ಸಂಜೆ ರೋಹ್ಟಕ್ ನ ಮೆಹರ್ ಸಿಂಗ್ ಅಖಾಡದಲ್ಲಿ ಗುಂಡಿನ ದಾಳಿ ನಡೆದಿದೆ. ಅಖಾಡವು ಜಾಟ್ ಕಾಲೇಜಿಗೆ ಹೊಂದಿಕೊಂಡಿದೆ.
ಘಟನೆಯ ಕುರಿತು ಮಾಹಿತಿ ಲಭಿಸಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಘಟನೆಯ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.
ಹಳೆ ವೈಷಮ್ಯದ ಕಾರಣಕ್ಕೆ ಗುಂಡಿನ ದಾಳಿ ನಡೆದಿದೆ ಎಂದು ಆರಂಭಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡಿನ ದಾಳಿಯಲ್ಲಿ 7 ಮಂದಿ ಗಾಯಗೊಂಡಿದ್ದು, ಈ ಪೈಕಿ ಐವರು ಮೃತಪಟ್ಟಿದ್ದಾರೆ. ಮೃತಪಟ್ಟ ಐವರ ಪೈಕಿ ಮೂವರನ್ನು ಪ್ರದೀಪ್ ಮಲಿಕ್ , ಪೂಜಾ ಹಾಗೂ ಸಾಕ್ಷಿ ಎಂದು ಗುರುತಿಸಲಾಗಿದೆ. ಪೊಲೀಸರು ಶವಗಳನ್ನು ವಶಕ್ಕೆ ಪಡೆದು ಶವಪರೀಕ್ಷೆಗೆ ಕಳುಹಿಸಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ.
ಮೃತಪಟ್ಟವರಲ್ಲಿ ಇಬ್ಬರು ಮಹಿಳಾ ಕುಸ್ತಿಪಟುಗಳು ಹಾಗೂ ಕೋಚ್ ಸೇರಿದ್ದಾರೆ ಎಂದು ದೈನಿಕ್ ಜಾಗರಣ್ ವರದಿ ತಿಳಿಸಿದೆ.





