ದರೋಡೆಗೆ ಹೊಂಚುಹಾಕುತ್ತಿದ್ದ ಆರೋಪ: ಮೂವರನ್ನು ಬಂಧಿಸಿದ ತುಂಗಾನಗರ ಪೊಲೀಸರು

ಶಿವಮೊಗ್ಗ: ದರೋಡೆಗೆ ಹೊಂಚುಹಾಕಿ ಕುಳಿತಿದ್ದರೆನ್ನಲಾದ ಮೂವರನ್ನು ಬಂಧಿಸುವಲ್ಲಿ ತುಂಗಾನಗರ ಠಾಣೆ ಪಿಎಸ್ಐ ತಿರುಮಲೇಶ್ ನೇತೃತ್ವದ ಪೊಲೀಸರ ತಂಡ ಯಶಸ್ವಿಯಾಗಿದೆ.
ಅನುಪಿನಕಟ್ಟೆ ಚಾನೆಲ್ ಬಳಿ ಐದು ಜನರ ತಂಡ ಕೈಯಲ್ಲಿ ದೊಣ್ಣೆ, ಚಾಕು ಹಿಡಿದು ದರೋಡೆಗೆ ಹೊಂಚು ಹಾಕಿ ಕುಳಿತಿತ್ತು ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ದಿಢೀರ್ ದಾಳಿ ನಡೆಸಿದ ಪಿಎಸ್ಐ ತಿರುಮಲೇಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದೆ. ಉಳಿದ ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಇವರ ಪತ್ತೆಗೆ ಬಲೆ ಬೀಸಿದ್ದಾರೆ.
ತಬರಾಕುಲ್ಲಾ ಯಾನೆ ತಪ್ಪಣ್ಣ, ಮಹಮ್ಮದ್ ಅಸ್ಲಾಮ್ ಹಾಗೂ ಮೊಹಮ್ಮದ್ ಇಸ್ಮಾಯಿಲ್ ಬಂಧಿತ ಆರೋಪಿಗಳು. ಬಂಧಿತರಿಂದ ಕೃತ್ಯಕ್ಕೆ ಬಳಸಿದ 100 ಗ್ರಾಂ ಖಾರದ ಪುಡಿಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಮೂವರು ಟಿಪ್ಪಿನಗರ ನಿವಾಸಿಗಳು ಎಂದು ತಿಳಿದುಬಂದಿದೆ.
ಶಿವಮೊಗ್ಗ ಉಪವಿಭಾಗದವ ಡಿವೈಎಸ್ಪಿ ಉಮೇಶ್ ಈಶ್ವರ್ ನಾಯಕ್ ಹಾಗೂ ತುಂಗಾನಗರ ಪೊಲೀಸ್ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ದೀಪಕ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಪಿಎಸ್ಐ ತಿರುಮಲೇಶ್, ಸಯ್ಯದ್ ಇಮ್ರಾನ್, ಗುರುರಾಜ್, ರಾಜು ರವೀಂದ್ರ, ಪ್ರಸಾದ್, ಅರುಣ್ ಕುಮಾರ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.







