200 ಅಡಿ ಆಳದ ಕಮರಿಗೆ ಉರುಳಿ ಬಿದ್ದ ಬಸ್: ಕನಿಷ್ಠ 4 ಮಂದಿ ಮೃತ್ಯು

ಸಾಂದರ್ಭಿಕ ಚಿತ್ರ
ಹೈದರಾಬಾದ್: ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ಪ್ರವಾಸಿ ಬಸ್ಸೊಂದು ಪಲ್ಟಿಯಾಗಿ ಕಮರಿಗೆ ಬಿದ್ದ ಪರಿಣಾಮ ಕನಿಷ್ಠ 4 ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕ ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತಾದಂತೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.
ಬಸ್ ನಲ್ಲಿ ಒಟ್ಟು 18 ಪ್ರಯಾಣಿಕರು ಇದ್ದರು ಮತ್ತು ನಾಲ್ಕು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಕಚೇರಿ ತಿಳಿಸಿದೆ.
ವಿಶಾಖಪಟ್ಟಣಂ ಘಾಟ್ ರಸ್ತೆಯಲ್ಲಿ 200 ಅಡಿ ಕಣಿವೆಗೆ ಬಸ್ ಮಗುಚಿ ಬಿದ್ದಿದೆ. ಪ್ರಯಾಣಿಕರು ಹೈದರಾಬಾದ್ ನಿಂದ ಅರಕು ವ್ಯಾಲಿಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.
ಪೊಲೀಸರು ಆ್ಯಂಬುಲೆನ್ಸ್ ವಾಹನಗಳು ಮತ್ತು ವೈದ್ಯಕೀಯ ಸಿಬ್ಬಂದಿಗಳೊಂದಿಗೆ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಬ್ರೇಕ್ ವೈಫಲ್ಯವು ಅಪಘಾತಕ್ಕೆ ಮುಖ್ಯ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ ಎಂದು ವರದಿ ತಿಳಿಸಿದೆ.
ಆಂಧ್ರಪ್ರದೇಶದ ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಪರಿಸ್ಥಿತಿಯನ್ನು ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿಯ ತಿಳಿಸಿದೆ.





