ಚೀನಾ ಆರಂಭಿಕ ಪ್ರಕರಣಗಳ ಮೂಲ ಅಂಕಿಅಂಶ ಕೊಟ್ಟಿಲ್ಲ: ಡಬ್ಲ್ಯುಎಚ್‌ಒ ಪರಿಣತರ ತಂಡದ ಸದಸ್ಯ

ಶಾಂಘೈ (ಚೀನಾ), ಫೆ. 13: ಕೋವಿಡ್-19 ಸಾಂಕ್ರಾಮಿಕದ ಆರಂಭಿಕ ಪ್ರಕರಣಗಳ ಮೂಲ ದತ್ತಾಂಶಗಳನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ)ಯ ಪರಿಣತರ ತಂಡಕ್ಕೆ ನೀಡಲು ಚೀನಾ ನಿರಾಕರಿಸಿದೆ ಎಂದು ತಂಡದ ಸದಸ್ಯರೊಬ್ಬರು ಹೇಳಿದ್ದಾರೆ.
ಕೊರೋನ ವೈರಸ್ ಮೂಲದ ಬಗ್ಗೆ ತನಿಖೆ ನಡೆಸುವುದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯ ಪರಿಣತರ ತಂಡವೊಂದು ಇತ್ತೀಚೆಗೆ ಚೀನಾಕ್ಕೆ ಹೋಗಿತ್ತು. ಚೀನಾದಲ್ಲಿ ಅದು ತನ್ನ ತನಿಖೆಯನ್ನು ಮುಗಿಸಿದೆಯಾದರೂ ಸಾಂಕ್ರಾಮಿಕದ ಮೂಲವನ್ನು ಪತ್ತೆಹಚ್ಚಲು ಅದಕ್ಕೆ ಸಾಧ್ಯವಾಗಿಲ್ಲ.
ಚೀನಾದ ವುಹಾನ್ ನಗರದಲ್ಲಿ 2019ರ ಡಿಸೆಂಬರ್‌ನಲ್ಲಿ ಸಾಂಕ್ರಾಮಿಕ ಮೊದಲು ಪತ್ತೆಯಾದಾಗ ವರದಿಯಾದ 174 ಪ್ರಕರಣಗಳ ರೋಗಿಗಳ ಮೂಲ ಅಂಕಿಅಂಶಗಳನ್ನು ನೀಡುವಂತೆ ತಂಡವು ಕೋರಿತ್ತು. ಆದರೆ, ಆ ಪ್ರಕರಣಗಳ ಸಾರಾಂಶಗಳನ್ನು ಮಾತ್ರ ನೀಡಲಾಗಿದೆ ಎಂದು ತಂಡದ ಸದಸ್ಯ ಹಾಗೂ ಆಸ್ಟ್ರೇಲಿಯದ ಸಾಂಕ್ರಾಮಿಕ ರೋಗಗಳ ಪರಿಣತ ಡಾಮಿನಿಕ್ ಡ್ವಯರ್ ಹೇಳಿದರು.
ರೋಗಿಗಳಿಗೆ ಯಾವ ಪ್ರಶ್ನೆಗಳನ್ನು ಕೇಳಲಾಗಿದೆ, ಅದಕ್ಕೆ ಅವರು ಯಾವ ಉತ್ತರಗಳನ್ನು ನೀಡಿದರು ಹಾಗೂ ಆ ಉತ್ತರಗಳನ್ನು ಯಾವ ರೀತಿ ವಿಶ್ಲೇಷಿಸಲಾಗಿದೆ ಮುಂತಾದ ವಿವರಗಳು ಮೂಲ ಅಂಕಿಅಂಶಗಳಲ್ಲಿ ಇರುತ್ತವೆ ಎಂದು ಅವರು ಹೇಳಿದರು.
‘‘ಅದನ್ನು ಯಾಕೆ ಕೊಡಲಾಗಿಲ್ಲ ಎಂದು ನಾನು ಹೇಳಲಾರೆ. ರಾಜಕೀಯವೋ, ಸಮಯ ಸರಿಯಿಲ್ಲವೆಂದೋ ಅಥವಾ ಕಷ್ಟವೇ ಎನ್ನುವುದು ನನಗೆ ಗೊತ್ತಿಲ್ಲ. ಊಹಾಪೋಹ ಮಾಡಬಹುದಷ್ಟೇ’’ ಎಂದರು.





