"ಕಂಗನಾ ಟ್ವೀಟ್ ಗಳನ್ನು ನೋಡುತ್ತಿದ್ದರೆ, ನಾನು ಮತ್ತೆ ನ್ಯಾಯಾಂಗ ಬಂಧನಕ್ಕೆ ಮರಳುವುದು ಉಚಿತವೆನಿಸುತ್ತದೆ"
ಜಾಮೀನಿನ ಬಳಿಕ ಮೊದಲ ಟ್ವೀಟ್ ನಲ್ಲೇ ವ್ಯಂಗ್ಯವಾಡಿದ ಮುನವ್ವರ್ ಫಾರೂಕಿ

ಹೊಸದಿಲ್ಲಿ: ಹಿಂದೂ ದೇವತೆಗಳನ್ನು ಮತ್ತು ಗೃಹ ಸಚಿವ ಅಮಿತ್ ಶಾರನ್ನು ಅವಮಾನಿಸಿದ್ದಾರೆಂದು ಆರೋಪಿಸಿ ಕಾಮೆಡಿಯನ್ ಮುನವ್ವರ್ ಫಾರೂಕಿಯವರನ್ನು ಇಂಧೋರ್ ಪೊಲೀಸರು ಬಂಧಿಸಿದ್ದರು. ಬಳಿಕ ದೇವತೆಗಳನ್ನು ಅವಮಾನಿಸಿದ ಕುರಿತು ಯಾವುದೇ ಪುರಾವೆಯಿಲ್ಲ ಎಂದು ಹೇಳಿಕೆ ನೀಡಿದ್ದರು. ಸದ್ಯ ಸುಪ್ರೀಂ ಕೋರ್ಟ್ ಮುನವ್ವರ್ ಗೆ ಮಧ್ಯಂತರ ಜಾಮೀನು ನೀಡಿದೆ. ಇದೀಗ ಜಾಮೀನು ಪಡೆದು ಬಿಡುಗಡೆಯಾದ ಬಳಿಕ ಮೊದಲ ಬಾರಿಗೆ ಮುನವ್ವರ್ ಟ್ವೀಟ್ ಮಾಡಿದ್ದಾರೆ.
ಬಿಡುಗಡೆಯಾದ ಬಳಿಕ ತಮ್ಮ ಮೊದಲ ಟ್ವೀಟ್ ನಲ್ಲಿ ಕಂಗನಾ ರಣಾವತ್ ಕುರಿತು ಮುನವ್ವರ್ ವ್ಯಂಗ್ಯವಾಡಿದ್ದಾರೆ. " ಕಂಗಣಾ ರಣಾವತ್ ಮಾಡುತ್ತಿರುವ ಟ್ವೀಟ್ ಗಳನ್ನು ನೋಡಿದರೆ ನನಗೆ ಮತ್ತೆ ನ್ಯಾಯಾಂಗ ಬಂಧನಕ್ಕೆ ಮರಳುವುದೇ ಉಚಿತವೆನಿಸುತ್ತಿದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ. ಈಗಾಗಲೇ 83 ಸಾವಿರಕ್ಕೂ ಹೆಚ್ಚು ಲೈಕ್ ಗಳಿಸಿರುವ ಟ್ವೀಟ್ ವೈರಲ್ ಆಗಿದೆ.
"ಮುನವ್ವರ್ ಫಾರೂಕಿ ಜೈಲಿನಿಂದ ಬಂದ ಬಳಿಕ ಇನ್ನೂ ಉತ್ತಮ ಹಾಸ್ಯಗಾರನಾಗುತ್ತಾರೆಂದು ನಾನು ಮೊದಲೇ ಹೇಳಿದ್ದೆ. ನಿಮ್ಮ ಉತ್ತಮ ಕಾರ್ಯಗಳನ್ನು ಮುಂದುವರಿಸಿ" ಎಂದು ಬಳಕೆದಾರರೋರ್ವರು ಪ್ರತಿಕ್ರಿಯಿಸಿದ್ದಾರೆ.
Kangana ke tweets padke lag raha hai
— munawar faruqui (@munawar0018) February 11, 2021
Fir se Judicial custody chala jaun!







