ಹೋರಾಟಗಾರ್ತಿ ನವದೀಪ ಕೌರ್ ಅಕ್ರಮ ಬಂಧನ: ಹರಿಯಾಣ ಸರಕಾರಕ್ಕೆ ಹೈಕೋರ್ಟ್ ನೋಟಿಸ್

ಚಂಡೀಗಢ: ದಲಿತ ಕಾರ್ಮಿಕ ಹಕ್ಕುಗಳ ಹೋರಾಟಗಾರ್ತಿ ನವದೀಪ ಕೌರ್ ಅವರನ್ನು ಅಕ್ರಮವಾಗಿ ಬಂಧಿಸಿರುವ ಕುರಿತ ದೂರುಗಳನ್ನು ಸ್ವೀಕರಿಸಿದ ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್ ಶುಕ್ರವಾರ ಹರ್ಯಾಣ ಸರಕಾರಕ್ಕೆ ನೋಟಿಸ್ ನೀಡಿದೆ.
ಜನವರಿ 12 ರಂದು ರಾಜ್ಯದ ಕುಂಡ್ಲಿಯಲ್ಲಿ ಕಾರ್ಮಿಕರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾಗ ಬಂಧನಕ್ಕೊಳಗಾಗಿದ್ದ 23ರ ಹರೆಯದ ಕೌರ್ ಕಸ್ಟಡಿಯಲ್ಲಿದ್ದಾಗ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರು. ಕೌರ್ ವಿರುದ್ಧ ದಾಖಲಾಗಿರುವ ದೂರನ್ನು ವಿವರಿಸುವಂತೆ ನ್ಯಾಯಾಲಯವು ಹರ್ಯಾಣ ಸರಕಾರವನ್ನು ಕೇಳಿದೆ.
ನವದೀಪ್ ಕೌರ್ ಅವರನ್ನು ಹರ್ಯಾಣ ಪೊಲೀಸರು ಅಕ್ರಮವಾಗಿ ಬಂಧಿಸಿರುವ ಕುರಿತು ಫೆ.6 ಹಾಗೂ 8ರಂದು ಸ್ವೀಕರಿಸಿರುವ ಅನಾಮಧೇಯ ದೂರುಗಳನ್ನು ತೆಗೆದುಕೊಳ್ಳುವುದಾಗಿ ನ್ಯಾಯಾಲಯ ಹೇಳಿದೆ.
1 ತಿಂಗಳಿನಿಂದ ಜೈಲಿನಲ್ಲಿರುವ ಸಾಮಾಜಿಕ ಕಾರ್ಯಕರ್ತೆ ಕೌರ್ ಗುರುವಾರ ತನ್ನ ವಿರುದ್ಧದ ಮೂರು ಪ್ರಕರಣಗಳಲ್ಲಿ ಒಂದರಲ್ಲಿ ಜಾಮೀನು ಪಡೆದಿದ್ದರು. ಆದರೆ, ಮತ್ತೊಂದು ಪ್ರಕರಣದಲ್ಲಿ ಅವರ ಜಾಮೀನು ಅರ್ಜಿ ಜ.12ರಂದು ತಿರಸ್ಕೃತಗೊಂಡಿರುವುದರಿಂದ ಅವರು ಜೈಲಿನಲ್ಲಿಯೇ ಇರುವಂತಾಗಿದೆ. ಮೂರನೇ ಪ್ರಕರಣದ ವಿಚಾರಣೆಯು ಸೋಮವಾರ ನಡೆಯಲಿದೆ.
ಕೌರ್ ಬಂಧನಕ್ಕೆ ದೇಶದ ರಾಜಕೀಯ ನಾಯಕರು ಪ್ರತಿಭಟಿಸಿದ್ದಾರೆ. ಅಂತರ್ ರಾಷ್ಟ್ರೀಯ ಮಟ್ಟದಲ್ಲೂ ಇದು ಟೀಕೆಗೆ ಗುರಿಯಾಗಿದ್ದು, ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸಂಬಂಧಿ, ವಕೀಲೆ ಹಾಗೂ ಲೇಖಕಿ ಮೀನಾ ಹ್ಯಾರಿಸ್ ಸಹಿತ ಹಲವರು ಕೌರ್ ಬಂಧನದ ವಿರುದ್ಧ ಧ್ವನಿ ಎತ್ತಿದ್ದರು.







