ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಆಗಬೇಕು: ಮಾಜಿ ಸಿಎಂ ಸಿದ್ದರಾಮಯ್ಯ
ಡಾ.ಹಾ.ಮಾ.ನಾಯಕ ಪ್ರಶಸ್ತಿ ಪ್ರದಾನ ಸಮಾರಂಭ

ಮಂಡ್ಯ, ಫೆ.13: ಅನ್ಯಭಾಷೆ ಕಲಿಯಬಾರೆಂದೇನಿಲ್ಲ. ಆದರೆ, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಆಗಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.
ನಗರದ ಕರ್ನಾಟಕ ಸಂಘದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಮುತ್ಸದ್ಧಿ ಕೋಣಂದೂರು ಲಿಂಗಪ್ಪ ಹಾಗೂ ರಂಗಕರ್ಮಿ ಪ್ರಮೋದ್ ಶಿಗ್ಗಾಂವ್ ಅವರಿಗೆ 9ನೇ ವರ್ಷದ ಡಾ.ಹಾ.ಮಾ.ನಾಯಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ ಅನ್ಯಭಾಷಿಕರು ಕೇಳುವ ಪ್ರಶ್ನೆಗಳಿಗೆ ಅವರ ಭಾಷೆಯಲ್ಲಿಯೇ ಉತ್ತರ ಕೊಡುವ ಪರಿಪಾಠ ಕೈಬಿಡಬೇಕು. ನಮ್ಮ ಭಾಷೆಯನ್ನು ನಾವೇ ಮಾತನಾಡದಿದ್ದರೆ ಅನ್ಯ ಭಾಷಿಗರು ಬಂದು ಮಾತನಾಡುತ್ತಾರೆಯೇ ಎಂದು ಅವರು ತರಾಟೆಗೆ ತೆಗೆದುಕೊಂಡರು.
ಹಿಂದಿ ಭಾಷೆಯನ್ನು ಇತರ ಭಾಷಿಗರ ಮೇಲೆ ಹೇರುವ ಪ್ರಯತ್ನ ನಡೆಯುತ್ತಿದೆ. ಹಿಂದಿ ಎಲ್ಲಾ ರಾಜ್ಯಗಳಲ್ಲೂ ಆಡುಭಾಷೆಯಾಗಿಲ್ಲ. ಹಿಂದಿ ಐದಾರು ರಾಜ್ಯಗಳಲ್ಲಿ ಮಾತ್ರ ಇದೆ. ಬಹುತೇಕ ರಾಜ್ಯಗಳಲ್ಲಿ ಸ್ಥಳೀಯ ಭಾಷೆಯೇ ಪ್ರಾಧಾನ್ಯ ಗಳಿಸಿದೆ. ಕನ್ನಡ ಭಾಷೆ ಹಿಂದಿಗಿಂತ ಪ್ರಾಚೀನ, ಸಮೃದ್ಧವಾದುದು. ಹಾಗಾಗಿ ಕನ್ನಡವನ್ನು ಪಕ್ಕಕ್ಕೆ ತಳ್ಳಿ ಹಿಂದಿ ಮುಂದಕ್ಕೆ ಬರಲು ಸಾಧ್ಯವೇ ಇಲ್ಲ ಎಂದು ಅವರು ಹೇಳಿದರು.
ಭಾರತ ಅನೇಕ ಜನಾಂಗೀಯ, ಧರ್ಮದ, ಭಾಷೆಯ ಜನರು ಇರುವ ದೇಶ. ಹಿಂದಿ ಐದಾರು ರಾಜ್ಯಗಳ ಭಾಷೆಯಷ್ಟೆ. ನೈಋತ್ಯ, ತಮಿಳುನಾಡು, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಕೇರಳ, ಕರ್ನಾಟಕ, ಇನ್ನೂ ಹಲವಾರು ರಾಜ್ಯಗಳಲ್ಲಿ ಹಿಂದಿ ಇಲ್ಲವೇ ಇಲ್ಲ. ಆದರೆ, ಹಿಂದಿ ಹೇಗೆ ರಾಷ್ಟ್ರಭಾಷೆ ಆಗುತ್ತದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ನಾವೆಲ್ಲಾ ಕನ್ನಡಿಗರು. ಮೊದಲು ಕನ್ನಡಿಗ, ಆಮೇಲೆ ಭಾರತೀಯ. ಇದನ್ನು ನಾವು ಬೆಳೆಸಿಕೊಂಡರೆ ಇದಕ್ಕಿಂತ ಕನ್ನಡಕ್ಕೆ ನಾವು ಕೊಡುವ ಕೊಡುಗೆ ಬೇರೆ ಯಾವುದೂ ಇಲ್ಲ. ಕನ್ನಡ ನಾಡಿನಲ್ಲಿ ಕನ್ನಡತನ ವಾತಾವರಣ ನಿರ್ಮಾಣ ಆಗಬೇಕು. ಅದನ್ನು ಮಾಡುವವರು ಯಾರು? ಹಿಂದಿ, ತಮಿಳು, ಮಲೆಯಾಳದವರು ಮಾಡುತ್ತಾರ ? ಅದನ್ನು ನಾವೇ ಮಾಡಬೇಕು. ಅದು ನಮ್ಮ ಕರ್ತವ್ಯ. ಅದನ್ನು ಮಾಡಿದರೆ ನಾವು ಕನ್ನಡಿಗರು ಅಂತ ಹೇಳಿಕೊಳ್ಳಬಹುದು ಎಂದು ಅವರು ಹೇಳಿದರು.
ಇತರ ಭಾಷೆಗಳ ಬಗ್ಗೆ ಔದಾರ್ಯ ಇರಬೇಕು. ಆದರೆ, ಕನ್ನಡ ಭಾಷೆಯನ್ನೇ ಕುಸಿತ ಮಾಡುವಂತಹ ಔದಾರ್ಯ ಇರಬಾರದು. ಇನ್ನೊಬ್ಬರಿಗೆ ಕೆಡುಕು ಬಯಸಿದೇ ಇರುವುದೇ ಮನುಷ್ಯತ್ವ. ಬಸವಣ್ಣನವರು ಅದಕ್ಕೆ ದಯೆಯೇ ಧರ್ಮದ ಮೂಲವಯ್ಯಾ ಅಂದರು. ಧರ್ಮ ಎಂದರೆ ಇನ್ನೊಬ್ಬರಿಗೆ ಕೇಡು ಬಯಸದೇ ಇರುವುದು. ದಟ್ ಈಸ್ ವೇ ಆಫ್ ಲೈಫ್ ಎಂದು ಅವರು ವಿವರಿಸಿದರು.
ಕನ್ನಡ ಭಾಷೆ ಬಹಳ ಶ್ರೀಮಂತ ಭಾಷೆ, ಬಹಳ ಪ್ರಾಚೀನ ಭಾಷೆ. ಇದನ್ನು ಉಳಿಸಿ ಬೆಳೆಸುವುದು ನಮ್ಮ ಜವಾಬ್ಧಾರಿ, ಕರ್ತವ್ಯ. ಇದನ್ನು ಕರ್ನಾಟಕ ಸಂಘದ ಮೂಲಕ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ್‍ಗೌಡ ಮಾಡುತ್ತಿದ್ದಾರೆ. ಕನ್ನಡಕ್ಕೋಸ್ಕರ ದುಡ್ಡುಕೊಟ್ಟರೆ ಅದು ವೇಸ್ಟ್ ಅಲ್ಲ. ಸರಕಾರದ ದುಡ್ಡು ಯಾರದು? ಈ ನಾಡಿನ ಜನರದ್ದು, ಕನ್ನಡಿಗರದ್ದು ಎಂದು ಅವರು ಅಭಿಪ್ರಾಯಪಟ್ಟರು.
ಶಾಸಕ ಎಂ.ಶ್ರೀನಿವಾಸ್, ಮಾಜಿ ಸಚಿವ ಎನ್.ಚಲುವರಾಯಸ್ವಾಮಿ, ಮಾಜಿ ಶಾಸಕ ಬಿ.ರಾಮಕೃಷ್ಣ, ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ಕಾಂಗ್ರೆಸ್ ಮುಖಂಡರಾದ ರವಿಕುಮಾರ್‍ಗೌಡ ಗಣಿಗ, ಬಿ.ಎಸ್.ಶಿವಣ್ಣ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಇತರ ಗಣ್ಯರು ಉಪಸ್ಥಿತರಿದ್ದರು.
“ನಮ್ಮ ಪೋಷಕರಲ್ಲಿ ತಮ್ಮ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮದಲ್ಲಿ ಓದಿಸಿದರೆ ದೊಡ್ಡ ಹುದ್ದೆ ದೊರೆಯುತ್ತದೆ. ಕನ್ನಡದಲ್ಲಿ ಓದಿದರೆ ಸಾಧ್ಯವಿಲ್ಲ ಎಂಬ ನಂಬಿಕೆ ಇದೆ. ಆದರೆ, ಕನ್ನಡ ಮಾಧ್ಯದಲ್ಲಿ ಓದಿದರೇನೆ ಜ್ಞಾನ ಹೆಚ್ಚಲು ಸಾಧ್ಯ. ಆಡುಭಾಷೆ ಕನ್ನಡದಲ್ಲಿ ಚಿಂತನೆ ಮಾಡುವಷ್ಟು, ಬೇರೆ ಭಾಷೆಯಲ್ಲಿ ಚಿಂತನೆ ಮಾಡುವುದಕ್ಕೆ ಆಗುತ್ತಾ?”
-ಸಿದ್ದರಾಮಯ್ಯ, ವಿಪಕ್ಷ ನಾಯಕ







