ಪ್ರಕೃತಿಯ ಜೊತೆಗೆ ಪ್ರಗತಿಯ ಅನುಸಂಧಾನವಾಗಲಿ: ಏಕ ಗಮ್ಯಾನಂದ ಸ್ವಾಮೀಜಿ
ದ.ಕ.ಜಿಲ್ಲಾ ಮಟ್ಟದ 24ನೇ ಕನ್ನಡ ಸಾಹಿತ್ಯ ಸಮ್ಮೇಳನದ ವಿಚಾರಗೋಷ್ಠಿ
ಮಂಗಳೂರು, ಫೆ.13: ಕೋಟಿಗಟ್ಟೆಲೆ ಅನುದಾನ ಬಂದ ತಕ್ಷಣ ಅಭಿವೃದ್ಧಿಯಾಗುತ್ತದೆ ಎಂಬ ಭಾವನೆ ಸರಿಯಲ್ಲ. ಅಭಿವೃದ್ಧಿಯ ಕೆಲಸ ಕೈಗೆತ್ತಿಕೊಳ್ಳುವಾಗ ಪ್ರಕೃತಿ, ಪರಿಸರ, ಜೀವ ಸಂಕುಲದ ಸಂರಕ್ಷಣೆ ಮಾಡಿ ಪರಿಸರ ಸಮತೋಲನ ಕಾಪಾಡುವ ಕೆಲಸವೂ ಆಗಬೇಕು ಎಂದು ಸ್ವಚ್ಛ ಮಂಗಳೂರು ಅಭಿಯಾನದ ಸಂಚಾಲಕ ರಾಮಕೃಷ್ಣ ಮಠದ ಏಕ ಗಮ್ಯಾನಂದ ಸ್ವಾಮೀಜಿ ಹೇಳಿದರು.
ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಶಾರದಾ ವಿದ್ಯಾಲಯದಲ್ಲಿ ಜರುಗುತ್ತಿರುವ ದ.ಕ. ಜಿಲ್ಲಾ ಮಟ್ಟದ 24ನೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ನಡೆದ ‘ಪ್ರಕೃತಿ- ಪ್ರಗತಿ ಅನುಸಂಧಾನ’ ಎಂಬ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜನರಿಗೆ ಅನುಕೂಲತೆಗಳು ಬೇಕು. ಆದರೆ ಸಮಸ್ಯೆಗಳು ಬೇಡ. ವಸ್ತುಗಳು ಬೇಕು, ಆದರೆ ಅವುಗಳ ತ್ಯಾಜ್ಯ ವಿಲೇವಾರಿ ಹೇಗೆ ಎಂಬುದರ ಬಗ್ಗೆ ಚಿಂತನೆ ಇಲ್ಲ. ಪಚ್ಚನಾಡಿಯಲ್ಲಿ 3 ಎಕರೆ ಭೂಮಿಯಲ್ಲಿ ಆಗಿರುವ ಅನಾಹುತವು ಇದಕ್ಕೊಂದು ಸ್ಪಷ್ಟ ನಿದರ್ಶನ. ಪಚ್ಚನಾಡಿಯಲ್ಲಿ ಪ್ರತಿನಿತ್ಯ ಸುರಿಯುವ 300 ಟನ್ ತ್ಯಾಜ್ಯದಿಂದ ನೆಲ, ಜಲ, ವಾಯು ಸೇರಿದಂತೆ ಉಂಟಾಗಿರುವ ಪರಿಸರ ಮಾಲಿನ್ಯವನ್ನು ಸರಿ ಪಡಿಸುವುದು ಹೇಗೆಂಬ ಕುರಿತು ಸಾಕಷ್ಟು ಸಭೆಗಳು ನಡೆದಿದ್ದರೂ, ಸೂಕ್ತವಾದ ಪರಿಹಾರ ಇನ್ನೂ ಲಭಿಸಿಲ್ಲ ಎಂದು ಏಕ ಗಮ್ಯಾನಂದ ಸ್ವಾಮೀಜಿ ನುಡಿದರು.
ವಿಚಾರ ಮಂಡಿಸಿದ ಪ್ರಾಧ್ಯಾಪಕ ನರೇಂದ್ರ ರೈ ದೇರ್ಲ ದ.ಕ, ಜಿಲ್ಲೆಯಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಪರಿಸರದ ಮೇಲೆ ದೊಡ್ಡ ಮಟ್ಟದ ಹಾನಿಯಾಗಿದೆ. ಅಭಿವೃದ್ಧಿ ಚಟುವಕೆಗಳು ಭೂಮಿಯ ಧಾರಣಾ ಶಕ್ತಿಯ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಚಿಂತನೆ ಆಗ ಬೇಕಾಗಿದೆ. ನಿಸರ್ಗ ಉಳಿದರೆ ಮಾತ್ರ ನಾವೂ ಉಳಿಯುವೆವು. ನಿಸರ್ಗವನ್ನು ರಕ್ಷಿಸದಿದ್ದರೆ ಅತಿವೃಷ್ಠಿ, ಅನಾವೃಷ್ಠಿ, ಭೂಕಂಪ ಇತ್ಯಾದಿ ರೂಪದಲ್ಲಿ ನಿಸರ್ಗ ನಮಗೆ ತಿರುಗೇಟು ನೀಡುತ್ತದೆ ಎಂದರು.
ಪತ್ರಕರ್ತ ನಾ. ಕಾರಂತ ಪೆರಾಜೆ ಮಾತನಾಡಿ ಎತ್ತಿನ ಹೊಳೆ ಯೋಜನೆಯ ಕೆಟ್ಟ ಪರಿಣಾಮಗಳು ಈಗಾಗಲೇ ಕಾಣಿಸಲಾರಂಭಿಸಿವೆ. ಪ್ರಕೃತಿಯ ಮೇಲೆ ಹಾನಿ ಆಗುವಾಗ ಅದನ್ನು ಭರ್ತಿ ಮಾಡುವ ಜವಾಬ್ದಾರಿ ಕೂಡಾ ತನ್ನದು ಎಂದು ನಾವೆಲ್ಲರೂ ಯೋಚಿಸಬೇಕು. ಪರಿಸರ ಸಂರಕ್ಷಣೆ ಕುರಿತಂತೆ ಮಕ್ಕಳಿಗೆ ಬಾಲ್ಯದಿಂದಲೇ ಕಲಿಸಬೇಕು. ಪಠ್ಯದಲ್ಲಿ ಪ್ರಗತಿ- ಪ್ರಕೃತಿ ಅನುಸಂಧಾನದ ವಿಷಯ ಸೇರ್ಪಡೆ ಆಗಬೇಕೆಂದರು.
ಸಮ್ಮೇಳನದ ಸರ್ವಾಧ್ಯಕ್ಷ ಡಾ.ಎಂ. ಪ್ರಭಾಕರ ಜೋಶಿ, ಕಸಾಪ ಜಿಲ್ಲಾಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ವಿಧಾನ ಪರಿಷತ್‌ನ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಉಪಸ್ಥಿತರಿದ್ದರು.
ಜಿ.ಕೆ. ಭಟ್ ಸೇರಾಜೆ ಸ್ವಾಗತಿಸಿದರು. ಎಚ್.ಎಸ್. ಬೊಳ್ಳಾಡಿ ಕಾರ್ಯಕ್ರಮ ನಿರೂಪಿಸಿದರು.







