ಕನ್ನಡ ಭಾಷೆಯ ಉಳಿವಿನ ಜತೆಗೆ ಮಹತ್ವ ಹೆಚ್ಚಲಿ: ಡಾ.ಗಿರೀಶ್ ಭಟ್ ಅಜಕ್ಕಳ
ಮಂಗಳೂರು, ಫೆ.13: ದೈಹಿಕ ದುಡಿಮೆ ಜಾಸ್ತಿಯಾಗಿ ಬೌದ್ಧಿಕ ದುಡಿಮೆ ಕಡಿಮೆಯಾದರೆ ಪಾಂಡಿತ್ಯದಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಕನ್ನಡ ಜ್ಞಾನಕ್ಕೆ ಮಹತ್ವ ಬರುವುದರ ಜೊತೆಗೆ ಭಾಷೆ ಉಳಿಯುವ ಕೆಲಸ ಆಗಬೇಕಿದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಗಿರೀಶ್ ಭಟ್ ಅಜಕ್ಕಳ ಹೇಳಿದರು.
ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಶಾರದಾ ವಿದ್ಯಾಲಯದಲ್ಲಿ ಜರುಗುತ್ತಿರುವ ದ.ಕ. ಜಿಲ್ಲಾ ಮಟ್ಟದ 24ನೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ನಡೆದ ‘ಬಹುಭಾಷಾ ಪಂಡಿತ ಪರಂಪರೆ’ ಎಂಬ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡಾ.ವರದರಾಜ ಚಂದ್ರ ಗಿರಿ ವಿಚಾರ ಮಂಡಿಸಿ ಕನ್ನಡ ಸಾಹಿತ್ಯದ ಮೇಲೆ ಅಭಿಮಾನ ಮೂಡಲಿ ಎಂಬ ದೃಷ್ಟಿಯಿಂದ ಸಮ್ಮೇಳನ ನಡೆಯುತ್ತಿದೆ. ಆದರೆ ಕನ್ನಡ ಜಾಗೃತಿ ನಮ್ಮಿಂದ ಆಗಬೇಕು. ಕನ್ನಡ ಪಂಡಿತರಿಗೆ ಪ್ರೇರಣೆ ಸಿಕ್ಕಿದ್ದು ಕಾಸರಗೋಡು ನೀರ್ಚಾಲು ಶಾಲೆಯಲ್ಲಿ. ಕರಾವಳಿಯ ಕನ್ನಡವು ಕಲಿತು ಬಂದ ಕನ್ನಡವೇ ಹೊರತು ಅದು ಸಹಜ ಕನ್ನಡವಲ್ಲ. ಆದರೆ ಭಾಷಾ ಜ್ಞಾನದಲ್ಲಿ ಕರಾವಳಿ ಜನರು ಬೆಳೆದಿದ್ದಾರೆ. ಹಳೆಗನ್ನಡ, ನಡುಗನ್ನಡವನ್ನು ಕೂಡಾ ಪರಿಚಯಿಸಿದ್ದು ಈ ಪಂಡಿತ ಪರಂಪರೆಯಾಗಿದೆ. ಒಂದು ಕಾಲದಲ್ಲಿ ಕರಾವಳಿ ಜನರಿಗೆ ನಡುಗನ್ನಡಕ್ಕಿಂತ ಹಿಂದಿನ ಕನ್ನಡದ ಪರಿಚಯ ಇರಲಿಲ್ಲ ಎಂದರು.
ಡಾ.ಧನಂಜಯ ಕುಂಬಳೆ ‘ಕನ್ನಡ-ತುಳು ಪಂಡಿತ ಪರಂಪರೆ’ ಕುರಿತು ಮಾತನಾಡಿದರು. ಶ್ರೀ ಕ್ಷೇತ್ರ ಕಟೀಲು ದೇವಸ್ಥಾನದ ಅರ್ಚಕ ಹರಿನಾರಾಯಣದಾಸ ಅಸ್ರಣ್ಣ ವಿಚಾರ ಮಂಡಿಸಿದರು.
ಡಾ.ಮಾಲಿನಿ ಹೆಬ್ಬಾರ್ ಸ್ವಾಗತಿಸಿದರು. ಡಾ.ಪದ್ಮನಾಭ ಭಟ್ ವಂದಿಸಿದರು.







