ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ಸವ ಪೂರಕವಾಗಲಿ : ಶಾಸಕ ಉಮನಾಥ್ ಕೋಟ್ಯಾನ್
ನಂದಿನಿ ರಿವರ್ ಫೆಸ್ಟಿವಲ್ ಲಾಂಛನ ಬಿಡುಗಡೆ
ಮಂಗಳೂರು,ಫೆ.13: ನಂದಿನಿ ನದಿಯಲ್ಲಿ ನಡೆಯುವಂತಹ ‘ನಂದಿನಿ ನದಿ ಉತ್ಸವವು ಕರಾವಳಿಯ ಸಂಸ್ಕೃತಿ, ಕ್ರೀಡೆಯನ್ನು ಪ್ರೋತ್ಸಾಹಿಸುವುದರ ಜೊತೆಗೆ ಪ್ರವಾಸೋದ್ಯಮದ ಅಭಿವೃದ್ಧಿಗೂ ಪೂರಕವಾಗಲಿ ಎಂದು ಶಾಸಕ ಉಮನಾಥ್ ಕೋಟ್ಯಾನ್ ಹೇಳಿದರು.
ಸಸಿಹಿತ್ಲು ಆಂಜನೇಯ ವ್ಯಾಯಾಮ ಶಾಲೆಯ ವತಿಯಿಂದ ಸಸಿಹಿತ್ಲು ಸಮೀಪದ ನಂದಿನಿ ನದಿಯಲ್ಲಿ ಮಾ.20 ಮತ್ತು 21ರಂದು ನಡೆಯಲಿರುವ ‘ನಂದಿನಿ ರಿವರ್ ಫೆಸ್ಟಿವಲ್’ನ ಲಾಂಛನವನ್ನು ಶನಿವಾರ ಬೊಕ್ಕಪಟ್ಣದ ರಾಣಿ ಅಬ್ಬಕ್ಕ ನೌಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಮಾತನಾಡಿ ಜನಜೀವನ ಮತ್ತೆ ಯಥಾಸ್ಥಿತಿಗೆ ಬರುತ್ತಿರುವ ಈ ಸಂದರ್ಭ ಕೋವಿಡ್ ಮುನ್ನೆಚ್ಚರಿಕೆಯೊಂದಿಗೆ ಕರಾವಳಿಗೆ ಪ್ರವಾಸಿಗರನ್ನು ಸೆಳೆಯುವಂತಹ ಕೆಲಸ ಮಾಡಬೇಕಾಗಿದೆ, ಈ ನಿಟ್ಟಿನಲ್ಲಿ ಜನತೆಯ ಸಹಕಾರ ಅತ್ಯಗತ್ಯವಿದೆ. ಮುಂದಿನ ವರ್ಷದಿಂದ ಜಿಲ್ಲಾಡಳಿತ ನದಿ ಉತ್ಸವ ನಡೆಸುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದರು.
ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಪ್ರದೀಪ್ ಡಿಸೋಜ, ಮುಕ್ಕ ಸೀ ಫುಡ್ ಸಂಸ್ಥೆಯ ಆಡಳಿತ ನಿರ್ದೇಶಕ ಕೆ.ಮುಹಮ್ಮದ್ ಆರೀಫ್, ನ್ಯಾಯವಾದಿ ಆಶಾ ನಾಯಕ್, ಕೆಎಂಎಫ್ ಸಂಸ್ಥೆಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಜಯದೇವಪ್ಪ, ಪಣಂಬೂರು ಬೀಚ್ ಡೆವಲಪ್‌ಮೆಂಟ್ ಕಾರ್ಪೊರೇಷನ್‌ನ ಸಿಇಒ ಯತೀಶ್ ಬೈಕಂಪಾಡಿ ಉಪಸ್ಥಿತರಿದ್ದರು.
ಆಂಜನೇಯ ಗುಡಿ ಮತ್ತು ವ್ಯಾಯಾಮ ಶಾಲೆಯ ಅಧ್ಯಕ್ಷ ವಿನೋದ್ ಕುಮಾರ್ ಸ್ವಾಗತಿಸಿದರು. ಅನಿಲ್ ಕುಮಾರ್ ವಂದಿಸಿದರು.







