ಕೆಡ್ಡೆಸ ಕೂಟೊಡು ಕೆದಂಬಾಡಿದಾರ್ನ ನೆಂಪು ಕಾರ್ಯಕ್ರಮ

ಮಂಗಳೂರು, ಫೆ.13: ತನ್ನ ಚೊಚ್ಚಲ ಕೃತಿ ‘ಬೇಟೆಯ ನೆನಪುಗಳು’ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಸಂಚಲನ ಮೂಡಿಸಿದ ಶ್ರೇಷ್ಠ ಮೃಗಯಾ ಸಾಹಿತ್ಯ ನಿರ್ಮಾತೃ ಕೆದಂಬಾಡಿ ಜತ್ತಪ್ಪರೈ ತುಳುನೆಲದ ಗ್ರಾಮೀಣ ಬದುಕಿನ ಸೊಗಸುಗಾರಿಕೆಯನ್ನು ಜಗದಗಲ ಬಿತ್ತರಿಸಿದ ಹಿರಿಯರು. ಅರವತ್ತರ ಹರೆಯದ ಬಳಿಕ ಬರವಣಿಗೆಗೆ ತೊಡಗಿದ ಅವರು ಕೋವಿ ಬಿಟ್ಟು ಪೆನ್ನು ಹಿಡಿದ ಸಾಹಸಿಗ. ಅವರ ಮೊದಲ ಕೃತಿ ಇಂಗ್ಲಿಷ್ ಸೇರಿದಂತೆ ದೇಶದ ಹನ್ನೆರಡು ಭಾಷೆಗಳಿಗೆ ತರ್ಜುಮೆಯಾಗಿರುವುದು ಕನ್ನಡ ಸಾಹಿತ್ಯದ ಹಿರಿಮೆಗೆ ಸಾಕ್ಷಿ. ಕನ್ನಡ ಮತ್ತು ತುಳು ಭಾಷೆಗಳಲ್ಲಿ ಇಪ್ಪತ್ತಕ್ಕಿಂತಲೂ ಹೆಚ್ಚು ಮೌಲಿಕ ಕೃತಿಗಳನ್ನು ನೀಡಿದ ಅವರಿಗೆ ಕೇಂದ್ರ ಸರಕಾರದ ಭಾಷಾ ಸಮ್ಮಾನ್ ಪ್ರಶಸ್ತಿ ಸಹಜವಾಗಿಯೇ ಲಭಿಸಿದೆ ಎಂದು ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ಮೃಗಯಾ ಸಾಹಿತಿ ದಿ.ಕೆದಂಬಾಡಿ ಜತ್ತಪ್ಪರೈ ಅವರ ಜನ್ಮದಿನಾಚರಣೆ ಪ್ರಯುಕ್ತ ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ನಗರದ ಕೇಂದ್ರ ಕಚೇರಿಯಲ್ಲಿ ಏರ್ಪಡಿಸಿದ್ದ ‘ಕೆಡ್ಡೆಸ ಕೂಟೊಡು ಕೆದಂಬಾಡಿದಾರ್ನ ನೆಂಪು- ಮದಿಪು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೆಡ್ಡೆಸ ಆಚರಣೆಯ ವಿಶೇಷತೆ ಬಗ್ಗೆ ಮಾತನಾಡಿದ ಭಾಸ್ಕರ ರೈ ಕುಕ್ಕುವಳ್ಳಿ ‘ತುಳುನಾಡಿನ ಆಚರಣೆಗಳಲ್ಲಿ ಕೆಡ್ಡೆಸ ವಿಭಿನ್ನವಾದ ಆಶಯ ಹೊಂದಿದೆ. ಇದು ಭೂದೇವಿಯ ಫಲವಂತಿಕೆಯ ಹಬ್ಬ. ಭೂಮಿಗೆ ನೇಗಿಲು, ಗುದ್ದಲಿ ಊರದೇ ಆರಾಧಿಸುವ ಪರ್ವಕಾಲ. ಕೆಡ್ಡೆಸ ಗಾಳಿ ಗಿಡ ಮರಗಳಲ್ಲಿ ಹೂ-ಚಿಗುರುಗಳು ಕುಡಿಯೊಡೆಯಲು ಕಾರಣವಾಗುತ್ತದೆ. ಈ ದಿನಗಳಲ್ಲಿ ಕಾಡಿನ ಮೃಗ ಪಕ್ಷಿಗಳನ್ನು ಬೇಟೆಯಾಡುವ ಪದ್ಧತಿ ಅನಾದಿಯಿಂದಲೂ ನಡೆದುಕೊಂಡು ಬಂದಿದೆ’ಎಂದು ಹೇಳಿದರು.
ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಅಧ್ಯಕ್ಷತೆ ವಹಿಸಿದ್ದರು. ತೆರಿಗೆ ಸಲಹೆಗಾರ ಪುಂಡರೀಕಾಕ್ಷ ಕೈರಂಗಳ ಅತಿಥಿಗಳಾಗಿದ್ದರು.
ತುಳುನಾಡ ರಕ್ಷಣಾ ವೇದಿಕೆಯ ಮಂಗಳೂರು ತಾಲೂಕು ಅಧ್ಯಕ್ಷ ರಮೇಶ್ ಪೂಜಾರಿ ಶೀರೂರು ಸ್ವಾಗತಿಸಿದರು. ಪತ್ರಕರ್ತ ಗಂಗಾಧರ ಪಿಲಿಯೂರು ವಂದಿಸಿದರು.







