ರಾಹುಲ್ ಗಾಂಧಿ ಭಾರತದ ಪಾಲಿಗೆ ‘ಪ್ರಳಯಾಂತಕ ಮನುಷ್ಯ’: ನಿರ್ಮಲಾ ಸೀತಾರಾಮನ್

ಹೊಸದಿಲ್ಲಿ, ಫೆ. 13: ವಿವಿಧ ವಿಷಯಗಳ ಕುರಿತಂತೆ ನಕಲಿ ನಿರೂಪಣೆಗಳನ್ನು ಸೃಷ್ಟಿ ಮಾಡುತ್ತಿರುವ ಹಾಗೂ ಸಾಂವಿಧಾನದ ಕಾರ್ಯನಿರ್ವಾಹಕರನ್ನು ನಿರಂತರ ಅವಮಾನಿಸುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತದ ಪಾಲಿಗೆ ಪ್ರಳಯಾಂತಕ ಮನುಷ್ಯನಾಗುತ್ತಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಟೀಕಿಸಿದ್ದಾರೆ.
ಲೋಕಸಭೆಯಲ್ಲಿ ಬಜೆಟ್ ಕುರಿತು ಸಾಮಾನ್ಯ ಚರ್ಚೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಹುಲ್ ಗಾಂಧಿ ನಕಲಿ ನಿರೂಪಣೆಗಳನ್ನು ಸೃಷ್ಟಿಸುತ್ತಿದ್ದಾರೆ. ಆದರೆ, ಸರಕಾರದ ವಿರುದ್ಧ ಮಾಡಲಾದ ಆರೋಪದ ಕುರಿತ ಪ್ರತಿಕ್ರಿಯೆಗಳನ್ನು ಆಲಿಸುವ ತಾಳ್ಮೆ ಅವರಲ್ಲಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದ ಈ ಎರಡು ಪ್ರವೃತ್ತಿಗಳನ್ನು ನಾವು ಗುರುತಿಸುವ ಅಗತ್ಯ ಇದೆ. ಇದು ಚುನಾಯಿತ ಸಂಸದೀಯ ವ್ಯವಸ್ಥೆಯ ಮೇಲೆ ಅವರಿಗೆ ನಂಬಿಕೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ಸೀತಾರಾಮನ್ ಹೇಳಿದ್ದಾರೆ.
ಲೋಕಸಭೆಯಲ್ಲಿ ಗುರುವಾರ ಬಜೆಟ್ ಬಗ್ಗೆ ಮಾತನಾಡಲು ನಿರಾಕರಿಸಿದ ರಾಹುಲ್ ಗಾಂಧಿ ಕೃಷಿ ಕಾಯ್ದೆಗಳ ಕುರಿತು ಮಾತನಾಡಿರುವ ಬಗ್ಗೆ ಅವರು, ‘‘ಬಹುಶಃ ಅವರು ಭಾರತದ ಪಾಲಿಗೆ ವಿನಾಶಕಾರಿ ವ್ಯಕ್ತಿ’’ ಆಗುತ್ತಿದ್ದಾರೆ ಎಂದರು.
10 ವಿಷಯಗಳ ಬಗ್ಗೆ ರಾಹುಲ್ ಗಾಂಧಿ ಮಾತನಾಡಬೇಕೆಂದು ನಾನು ಬಯಸಿದ್ದೆ. ಆದರೆ, ರಾಹುಲ್ ಗಾಂಧಿ ಅವರು ಇವುಗಳಲ್ಲಿ ಯಾವುದನ್ನೂ ಉಲ್ಲೇಖಿಸದ ಹಿನ್ನೆಲೆಯಲ್ಲಿ ನಿರಾಶೆಗೊಂಡೆ ಎಂದು ಅವರು ಹೇಳಿದರು.
‘‘ಕೃಷಿ ಕಾಯ್ದೆಗಳ ಬಗ್ಗೆ ಕಾಂಗ್ರೆಸ್ ಯು ಟರ್ನ್ ಯಾಕೆ ತೆಗೆದುಕೊಂಡಿದೆ ಎಂಬುದನ್ನು ನಾನು ತಿಳಿಯಲು ಬಯಸಿದ್ದೆ. ಆದರೆ,ಅದಕ್ಕೆ ಸಂಬಂಧಿಸಿ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’’ ಎಂದು ಹೇಳಿದ ಅವರು, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿದಂತೆ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಚತ್ತೀಸ್‌ಗಢದಲ್ಲಿ ಕೃಷಿ ಸಾಲವನ್ನು ಯಾಕೆ ಮನ್ನಾ ಮಾಡಿಲ್ಲ ಎಂಬುದನ್ನು ರಾಹುಲ್ ಗಾಂಧಿ ಅವರು ಹೇಳಿಲ್ಲ ಎಂದರು.
ಕಾಂಗ್ರೆಸ್ ಅಧಿಕಾರದಲ್ಲಿರುವ ಪಂಜಾಬ್‌ನಲ್ಲಿ ಕಾರ್ಮಿಕರ ಸಮಸ್ಯೆಗಳು ಹಾಗೂ ಬೆಳೆ ತ್ಯಾಜ್ಯ ದಹನಕ್ಕೆ ಸಂಬಂಧಿಸಿ ಸರಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ರಾಹುಲ್ ಗಾಂಧಿ ಮಾತನಾಡಿಲ್ಲ ಎಂದು ಸೀತಾರಾಮನ್ ಹೇಳಿದರು.
ಮೂರು ಕೃಷಿ ಕಾಯ್ದೆಗಳಲ್ಲಿ ರೈತರಿಗೆ ವಿರುದ್ಧವಾಗಿರುವ ಯಾವುದೇ ಉಪ ವಾಕ್ಯವನ್ನು ರಾಹುಲ್ ಗಾಂಧಿ ಉಲ್ಲೇಖಿಸಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ನಿರ್ಮಲಾ ಸೀತಾರಾಮನ್ ಅವರ ಈ ಹೇಳಿಕೆಯನ್ನು ನಾವು ಖಂಡಿಸುತ್ತೇವೆ ಎಂದು ಹೇಳಿರುವ ಲೋಕಸಭೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಈ ಕುರಿತಾಗಿ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇವೆ ಎಂದಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಅಸಂಸದೀಯ ಪದ ಬಳಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಚೌಧರಿ, ಅವರು ಈ ರೀತಿ ಮಾತನಾಡಬಾರದಿತ್ತು ಎಂದಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಸಂಸದ ಟಿ.ಎನ್. ಪ್ರತಾಪನ್ ಅವರು ನಿರ್ಮಲಾ ಸೀತಾರಾಮನ್ ವಿರುದ್ಧ ಹಕ್ಕುಚ್ಯುತಿ ಪ್ರಸ್ತಾವ ಮಂಡಿಸಲು ಮುಂದಾಗಿದ್ದಾರೆ.







