ಚೆನ್ನೈ: ತಮಿಳುನಾಡಿನ ರೈತರನ್ನು ಪ್ರಶಂಸಿಸಿದ ಪ್ರಧಾನಿ ಮೋದಿ

ಚೆನ್ನೈ: ʼದಾಖಲೆಯ ಆಹಾರ ಉತ್ಪಾದನೆʼ ಮತ್ತು ಉತ್ತಮವಾಗಿ ನೀರಿನ ಬಳಕೆ ಮಾಡುತ್ತಿರುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನ ರೈತರನ್ನು ಶ್ಲಾಘಿಸಿದ್ದಾರೆ. ಭಾನುವಾರ ಚೆನ್ನೈನಲ್ಲಿ ಮಾತನಾಡಿದ ಅವರು, "ದಾಖಲೆಯ ಆಹಾರ ಧಾನ್ಯ ಉತ್ಪಾದನೆ ಮತ್ತು ನೀರಿನ ಸಂಪನ್ಮೂಲಗಳ ಉತ್ತಮ ಬಳಕೆಗಾಗಿ ನಾನು ತಮಿಳುನಾಡಿನ ರೈತರನ್ನು ಪ್ರಶಂಸಿಸಲು ಬಯಸುತ್ತೇನೆ. ನೀರಿನ ಸಂರಕ್ಷಣೆಗಾಗಿ ನಾವು ಏನು ಮಾಡಬೇಕೋ ಅದನ್ನು ಮಾಡಬೇಕು. ʼಒಂದು ಹನಿ, ಹೆಚ್ಚು ಬೆಳೆʼ ನಮ್ಮ ಮಂತ್ರವಾಗಿರಬೇಕು ಎಂದು ಅವರು ಹೇಳಿದರು.
ಈ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ತಮಿಳುನಾಡಿನಲ್ಲಿ ಪ್ರಧಾನಿ ಚೆನ್ನೈ ಮೆಟ್ರೋ ರೈಲಿನ ವಿಭಾಗ ಸೇರಿದಂತೆ ಹಲವಾರು ಯೋಜನೆಗಳನ್ನು ಆರಂಭಿಸಿದ ಬಳಿಕ ಮಾತನಾಡುತ್ತಿದ್ದರು.
"ನಾವು 9 ಕಿ.ಮೀ ಉದ್ದದ ಮೆಟ್ರೋ ರೈಲುಗಳನ್ನು ಪ್ರಾರಂಭಿಸುತ್ತಿರುವುದು ಎಲ್ಲರಿಗೂ ಸಂತೋಷವನ್ನು ನೀಡಿದ್ದು, ಇದು ಭಾರತೀಯ ಗುತ್ತಿಗೆದಾರರಿಂದ ಕೋವಿಡ್ ಹೊರತಾಗಿಯೂ ನಿಗದಿತ ಸಮಯದಲ್ಲಿ ಪೂರ್ಣಗೊಂಡಿದೆ" ಎಂದು ಅವರು ಹೇಳಿದರು.
ಚೆನ್ನೈ ಮೆಟ್ರೋ ವೇಗವಾಗಿ ಬೆಳೆಯುತ್ತಿದೆ. ಈ ವರ್ಷದ ಬಜೆಟ್‌ನಲ್ಲಿ, ಯೋಜನೆಯ ಎರಡನೇ ಹಂತಕ್ಕೆ, 63,000 ಕೋಟಿ ನಿಗದಿಪಡಿಸಲಾಗಿದೆ. ಯಾವುದೇ ನಗರದಲ್ಲಿ ಯೋಜನೆಗಾಗಿ ಮೀಸಲಿಟ್ಟ ದೊಡ್ಡ ಮೊತ್ತ ಇದು. ಇದು ಚೆನ್ನೈ ಜನರಿಗೆ ಸಹಾಯ ಮಾಡುತ್ತದೆ ” ಎಂದು ಅವರು ಹೇಳಿದರು.







