ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧೆ: ಮಾಜಿ ಸಿಎಂ ಕುಮಾರಸ್ವಾಮಿ

ಬೆಂಗಳೂರು, ಫೆ.14: ಮುಂಬರುವ ಜಿಪಂ, ತಾಪಂ ಹಾಗೂ ಉಪ ಚುನಾವಣೆಯಲ್ಲಿ ಜೆಡಿಎಸ್‍ನ ಶಕ್ತಿ ಏನು ಎಂಬುದನ್ನು ತೋರಿಸಬೇಕಿದೆ. ಸೀಟು ಹಂಚುವಾಗ ಸಣ್ಣಪುಟ್ಟ ವ್ಯತ್ಯಾಸವಾದರೂ ಯಾರು ತಲೆಕೆಡಿಸಿಕೊಳ್ಳದೇ, ಐಕ್ಯತೆಯಿಂದ ಕೆಲಸ ಮಾಡಬೇಕಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಕಿವಿಮಾತು ಹೇಳಿದ್ದಾರೆ.
ರವಿವಾರ ನಗರದ ಅರಮನೆ ಮೈದಾನದಲ್ಲಿ ಜೆಡಿಎಸ್ ವಿಚಾರ-ವಿಕಾಸ-ವಿಕೇಂದ್ರೀಕರಣ ಸಮಾವೇಶ ಮತ್ತು ನೂತನ ಗ್ರಾಪಂ ಸದಸ್ಯರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾನು ನಿಮಗೆ ಮಾರ್ಗದರ್ಶನ ಮಾಡಬಹುದಷ್ಟೇ. ಎಲ್ಲ ಕಡೆ ಪ್ರವಾಸ ಮಾಡಲು ಸಾಧ್ಯವಾಗುವುದಿಲ್ಲ. ಈ ರೀತಿಯಾಗಿ ಮಾಡಿ ಎಂದು ನಾನು ಸಲಹೆ ಕೊಡಬಹುದು ಅಷ್ಟೇ. ನಮ್ಮಲ್ಲಿ ಪ್ರಬಲವಾದ ಘಟಕಗಳಿದೆ. ಮುಂಬರುವ ಜಿಪಂ, ತಾಪಂ ಚುನಾವಣೆ ನಮಗೆ ಬಹಳ ಮುಖ್ಯ. ಜೆಡಿಎಸ್ ಶಕ್ತಿ ಏನು ಎಂಬುದನ್ನು ಸಾಬೀತು ಮಾಡಬೇಕಿದೆ ಎಂದು ಕರೆ ನೀಡಿದರು.
ಮುಂಬರುವ ಚುನಾವಣೆಯಲ್ಲಿ ನಮ್ಮ ಪಕ್ಷ ಅತಿ ಹೆಚ್ಚು ಸ್ಥಾನ ಗೆಲ್ಲಬೇಕು. ಜೊತೆಗೆ ಈ ರಾಜ್ಯದಲ್ಲಿ ನಮ್ಮ ಪ್ರಾದೇಶಿಕ ಪಕ್ಷವನ್ನು ಉಳಿಸಬೇಕು. ಅದು ನಿಮ್ಮಿಂದ ಮಾತ್ರ ಸಾಧ್ಯ, ನೀವೇ ಈ ಪಕ್ಷ ಉಳಿಸಬೇಕು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.
ಗ್ರಾಪಂ ಚುನಾವಣೆಯಲ್ಲಿ ನಮ್ಮನ್ನು ಎರಡು ರಾಷ್ಟ್ರೀಯ ಪಕ್ಷಗಳು ಲಘುವಾಗಿ ಕಂಡಿದ್ದವು. ಆದರೆ, ಚುನಾವಣೆಯಲ್ಲಿ 16 ಸಾವಿರದಷ್ಟು ಜೆಡಿಎಸ್ ಬೆಂಬಲಿತರು ಗೆದ್ದು ಜೆಡಿಎಸ್‍ನ ಶಕ್ತಿ ಏನೆಂಬುದನ್ನು ತೋರಿಸಿದ್ದಾರೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಸಮ್ಮಿಶ್ರ ಸರಕಾರದಲ್ಲಿ ನಮಗೆ ಸಹಕಾರ ಇಲ್ಲದಿದ್ದರೂ ರೈತರ ಸಾಲವನ್ನು ಮನ್ನಾ ಮಾಡಲಾಯಿತು. ಉಗ್ರಾಣದಲ್ಲಿ ರೈತರು ಬೆಳೆದ ಬೆಳೆಯನ್ನು ಸಂಗ್ರಹಿಸಿಡುವ ವ್ಯವಸ್ಥೆ ಕಲ್ಪಿಸಿಕೊಡಲಾಯಿತು. ಪಬ್ಲಿಕ್ ಶಾಲೆ ತೆರೆಯಲಾಯಿತು. ಆದರೆ, ಈಗಿನ ಸರಕಾರ ಪಬ್ಲಿಕ್ ಶಾಲೆಗಳನ್ನು ಮುಂದುವರಿಸುತ್ತಿಲ್ಲ ಎಂದು ಕಿಡಿಕಾರಿದರು.
ರೈತರ ಸಾಲಕ್ಕೆ ಸಂಬಂಧಿಸಿದಂತೆ ಸಹಕಾರ ಸಚಿವರು ಯಾರೂ ಅರ್ಜಿ ಹಾಕಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ಇಂತಹ ಸುಳ್ಳು ಹೇಳಿಕೆಗಳನ್ನು ನಾವು ನಂಬಲು ಸಾಧ್ಯವಿಲ್ಲ ಎಂದು ಹೇಳಿದರು.
ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಕಣಕ್ಕೆ: ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಮತ್ತು ಒಂದು ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳನ್ನು ನಿಲ್ಲಿಸಲಾಗುವುದು. ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಉಪ ಚುನಾವಣೆ ಹಾಗೂ ಬೆಳಗಾವಿ ಲೋಕಸಭೆಗೆ ಸದ್ಯದಲ್ಲಿಯೆ ಉಪಚುನಾವಣೆ ನಡೆಯಲಿದೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಜೆಡಿಎಸ್ ಶಾಸಕ ಬಂಡೆಪ್ಪ ಕಾಶಂಪೂರ ಮಾತನಾಡಿ, ವಿಧಾನಸೌಧದಲ್ಲಿ ಜೆಡಿಎಸ್ ಬಾವುಟ ಊರಲು ನಾವು ಪಣತೊಡಬೇಕು. 120 ಸೀಟ್ ಗೆಲ್ಲಲು ನಾವು ಶ್ರಮಪಡಬೇಕು. ಶ್ರಮ ಪಟ್ಟರೆ ಮುಂಬರುವ ಚುನಾವಣೆಯಲ್ಲಿ 120 ಸೀಟ್‍ಗಳನ್ನು ಜೆಡಿಎಸ್ ಗೆಲ್ಲಬಹುದು ಎಂದು ಹೇಳಿದರು.
ಬೀದರ್ ನಿಂದ ಚಾಮರಾಜನಗರದವರೆಗೂ ಜೆಡಿಎಸ್ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಇದ್ದರೂ ಕೆಲವರು ಜೆಡಿಎಸ್ ಎಲ್ಲಿದೇ ಎಂದು ಪ್ರಶ್ನಿಸುವವರು ಇದ್ದಾರೆ. ರೈತರ ಬಗ್ಗೆ ಮಾತನಾಡುವವರು ಯಾರಾದರೂ ಇದ್ದರೆ ಅದು ದೇವೇಗೌಡರು ಮಾತ್ರ. ಖುದ್ದು ಪ್ರಧಾನಿಯವರೇ ದೇವೇಗೌಡರಿಗೆ ಇರುವ ರೈತಪರ ಕಾಳಜಿ ಬಗ್ಗೆ ಮಾತಾಡಿದರು ಎಂದರು.
ಕಾಂಗ್ರೆಸ್ ನವರು ಎಲ್ಲ ಭಾಗ್ಯಗಳನ್ನು ಜಾರಿಗೆ ತಂದರು. ಆದರೆ ಈಗ ಎಲ್ಲಿದ್ದಾರೆ? ಅವರು 130 ರಿಂದ 78 ಸೀಟ್‍ಗೆ ಬಂದಿದ್ದಾರೆ. ಬಿಜೆಪಿ ಅವಧಿಯಲ್ಲೂ ಕೆಲಸಗಳಾಗುತ್ತಿಲ್ಲ. ಬಿಜೆಪಿ ಶಾಸಕರೇ ನಮ್ಮ ಕ್ಷೇತ್ರಗಳಿಗೆ ಹಣ ಕೊಡುತ್ತಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಬಂಡೆಪ್ಪ ಕಾಶಂಪೂರ್ ಹೇಳಿದರು.
ಸಮಾವೇಶದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ವೆಂಕಟರಾರಾವ್ ನಾಡಗೌಡ, ನಾಗನಗೌಡ ಕಂದಕೂರ, ಜಫ್ರುಲ್ಲಾಖಾನ್, ಮಹಿಳಾ ಜೆಡಿಎಸ್ ಅಧ್ಯಕ್ಷೆ ಲೀಲಾದೇವಿ ಆರ್. ಪ್ರಸಾದ್, ವಿಧಾನ ಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ಬೆಂಗಳೂರು ಜೆಡಿಎಸ್ ಅಧ್ಯಕ್ಷ ಆರ್.ಪ್ರಕಾಶ್ ಉಪಸ್ಥಿತರಿದ್ದರು.






.jpg)
.jpg)

