ಜನಜಾಗೃತಿಗಾಗಿ 41 ಮಂದಿಯ ತಂಡದಿಂದ ಮಲ್ಪೆ ಸೈಂಟ್ ಮೇರಿಸ್‌ನಿಂದ ಬೀಚ್‌ವರೆಗೆ ಈಜು

ಮಲ್ಪೆ, ಫೆ.14: ಈಜುಗಾರಿಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಡೆಕಾರ್ ಜೈದುರ್ಗ ಸ್ವಿಮ್ಮಿಂಗ್ ಕ್ಲಬ್ ವತಿಯಿಂದ ಹಿರಿಯ ಈಜುಪಟು ಗಂಗಾಧರ್ ಜಿ. ನೇತೃತ್ವದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 41 ಮಂದಿ ಈಜುಗಾರರು ರವಿವಾರ ಮಲ್ಪೆ ಸೈಂಟ್ ಮೇರಿಸ್ ದ್ವೀಪದಿಂದ ಮಲ್ಪೆ ಬೀಚ್‌ವರೆಗೆ ಈಜು ಮೂಲಕ ಸಾಧನೆ ಮಾಡಿದ್ದಾರೆ.
ಬೆಳಗ್ಗೆ 7.10ಕ್ಕೆ ಮಲ್ಪೆ ಸೈಂಟ್ ಮೇರಿಸ್‌ನಿಂದ ನಾಲ್ಕು ತಂಡವಾಗಿ ಈಜಿ ಕೊಂಡು ಹೊರಟ 41 ಮಂದಿ 3.8ಕಿ.ಮೀ. ದೂರದ ಮಲ್ಪೆ ಬೀಚ್‌ನ್ನು ಬೆಳಗ್ಗೆ 9.45ರ ಸುಮಾರಿಗೆ ತಲುಪಿದರು. ಈ ನಾಲ್ಕು ತಂಡದ ನೇತೃತ್ವ ವಹಿಸಿದ್ದವರು ತಮ್ಮ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡು ಈಜಿದರು. ಇದಕ್ಕೆ ಶಿವಮೊಗ್ಗ ಹಿರಿಯರಾದ ಸುಬ್ಬಣ್ಣ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಹಿರಿಯ ಈಜುಪಟು ಸೀತಾರಾಮ ಮುಂದಾಳತ್ವದಲ್ಲಿ ಮಂಗಳೂರಿನಿಂದ ಆಗಮಿಸಿದ 11 ಮಂದಿ ಈಜುಗಾರರು ಪಾಲ್ಗೊಂಡಿದ್ದರು. 9ವರ್ಷ ವಯಸ್ಸು ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಓರ್ವ ಮಹಿಳೆ, 60ವರ್ಷ ಮೇಲ್ಪಟ್ಟ ನಾಲ್ಕು ಮಂದಿ ಹಿರಿಯರು ಸಮುದ್ರದ ಅಲೆಗಳ ಮತ್ತು ಗಾಳಿಯ ಒತ್ತಡದ ಮಧ್ಯೆಯು ಬಹಳ ಉತ್ಸಾಹದಿಂದ ಈಜಿ ಗುರಿ ಮುಟ್ಟಿದರು.
ಬಳಿಕ ಮಲ್ಪೆ ಬೀಚ್ ಕಿನಾರೆಯಲ್ಲಿರುವ ಜ್ಞಾನಜ್ಯೋತಿ ಮಂದಿರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ್, ಲೆಕ್ಕ ಪರಿಶೋಧಕ ಮಲ್ಲೇಶ್, ಮಂದಿರದ ಅಧ್ಯಕ್ಷ ವಿಜಯ ತಿಂಗಳಾಯ, ಮಂಗಳೂರಿನ ಈಜುಪಟು ಡಾ.ಸುರೇಶ್ ಶಾಸ್ತ್ರಿ, ಕ್ಲಬ್‌ನ ಉಪಾಧ್ಯಕ್ಷೆ ಚಂದ್ರ ಕುಂದರ್ ಉಪಸ್ಥಿತರಿದ್ದರು.
ಇತ್ತೀಚೆಗೆ ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಸುತ್ತಿ ಬೀಗ ಹಾಕಿ ಸಮುದ್ರದಲ್ಲಿ ಈಜುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ನೂತನ ದಾಖಲೆ ನಿರ್ಮಿಸಿದ ಗಂಗಾಧರ ಜಿ.ಕಡೆಕಾರು ಅವರಿಗೆ ಮೂಲ ಪ್ರಮಾಣಪತ್ರವನ್ನು ಹಸ್ತಾಂತರಿಸಲಾಯಿತು. ಜಾಗೃತಿಗಾಗಿ ಈಜಿನಲ್ಲಿ ಪಾಲ್ಗೊಂಡ ಎಲ್ಲ 41 ಮಂದಿಗೆ ಪ್ರಮಾಣ ಪತ್ರ ಮತ್ತು ಪದಕಗಳನ್ನು ವಿತರಿಸಲಾಯಿತು. ನ್ಯಾಯವಾದಿ ರಾಜಶೇಖರ್ ಕಾರ್ಯಕ್ರಮ ನಿರೂಪಿಸಿದರು.







