ಪ್ರೇಮಿಗಳ ದಿನದಂದು ‘ಪರಿಸರ ಪ್ರೇಮಿಗಳಾಗೋಣ’ ಸಂದೇಶದೊಂದಿಗೆ ಸ್ವಚ್ಛತೆ

ಶಿರ್ವ, ಫೆ.14: ಬಂಟಕಲ್ಲು ರಾಜಾಪುರ ಸಾರಸ್ವತ ಯುವವೃಂದದ ಯುವಕರು ಪ್ರೇಮಿಗಳ ದಿನಾಚರಣೆಯಂದು ‘ಪರಿಸರ ಪ್ರೇಮಿಗಳಾಗೋಣ’ ಎಂಬ ವಿನೂತನ ಸಂದೇಶದೊಂದಿಗೆ ಪರಿಸರ ಸ್ವಚ್ಛಗೊಳಿಸುವ ಮೂಲಕ ಯುವ ಸಮುದಾಯಕ್ಕೆ ಮಾದರಿಯಾದರು.
ಕಟಪಾಡಿ-ಶಿರ್ವ-ಬೆಳ್ಮಣ್ ರಾಜ್ಯ ಹೆದ್ದಾರಿಯಲ್ಲಿ ಶಿರ್ವ ನ್ಯಾರ್ಮ ಶ್ರೀ ಮಹಾಲಸಾ ನಾರಾಯಣೀ ದೇವಳದ ಕ್ರಾಸ್ ರಸ್ತೆಯಿಂದ ಸೊಸೈಟಿ, ಡೋನ್ ಬೋಸ್ಕೊ ಶಾಲೆ, ಆರೋಗ್ಯಮಾತಾ ದೇವಾಲಯ, ಸಮುದಾಯ ಆರೋಗ್ಯ ಕೇಂದ್ರ, ಡಾ.ಯು.ಕೆ.ಆಚಾರ್ ಸರ್ಕಲ್‌ನವರೆಗೆ ರಸ್ತೆಯ ಇಕ್ಕೆಲಗಳಲ್ಲಿರುವ ಪ್ಲಾಸ್ಟಿಕ್ ಕಸ, ಪ್ರಯಾಣಿಕರು ಎಸೆದ ಕಸದ ತೊಟ್ಟೆಗಳು, ಇನ್ನಿತರ ಕಸಕಡ್ಡಿಗಳನ್ನು ಹೆಕ್ಕಿ, ರಸ್ತೆಯ ಎರಡೂ ಬದಿಗಳ ಪರಿಸರ ಸ್ವಚ್ಛಗೊಳಿಸಿದರು.
ಯುವವೃಂದದ ಗೌರವ ಅಧ್ಯಕ್ಷ ಹಾಗೂ ಶಿರ್ವ ಗ್ರಾ.ಪಂ ಸದಸ್ಯ ಕೆ.ರಾಮ ರಾಯ ಪಾಟ್ಕರ್, ಅಧ್ಯಕ್ಷ ವಿಶ್ವನಾಥ್ ಬಾಂದೇಲ್ಕರ್ ನೇತೃತ್ವ ವಹಿಸಿದ್ದರು. ಕಾರ್ಯದರ್ಶಿ ಆಶೀಷ್ ಪಾಟ್ಕರ್, ಗೌರವ ಸಲಹೆಗಾರರಾದ ಶಿಕ್ಷಕ ದೇವ ದಾಸ್ ಪಾಟ್ಕರ್ ಮುದರಂಗಡಿ, ವಿರೇಂದ್ರ ಪಾಟ್ಕರ್, ಭಾರತೀಯ ಸೇನಾ ದಳದ ರಾಜೇಂದ್ರ ಪಾಟ್ಕರ್, ನಿಕಟಪೂರ್ವ ಕಾರ್ಯದರ್ಶಿ ಅನಂತರಾಮ ವಾಗ್ಲೆ ಮೊದಲಾದವರು ಹಾಜರಿದ್ದರು.





