ಕಟ್ಟಡ ಕಾರ್ಮಿಕರ ಬಗ್ಗೆ ಸರಕಾರಕ್ಕೆ ಕಾಳಜಿ ಇಲ್ಲ: ಬಿ.ಎಂ.ಭಟ್

ಬೆಳ್ತಂಗಡಿ: ಕಟ್ಟಡ ಕಾರ್ಮಿಕರಿಂದ ಸರಕಾರಕ್ಕೆ ಕೋಟ್ಯಾಂತರ ರೂ. ಲಾಭವಿದ್ದರೂ ಅವರ ಬಗ್ಗೆ ಸರಕಾರಕ್ಕೆ ಕಾಳಜಿ ಇಲ್ಲದಾಗಿದೆ ಎಂದು ದ.ಕ. ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ಅದ್ಯಕ್ಷರಾದ ನ್ಯಾಯವಾದಿ ಬಿ.ಎಂ.ಭಟ್ ಹೇಳಿದರು.
ಅವರು ಇಂದು ದ.ಕ. ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ ಬೆಳ್ತಂಗಡಿ ತಾಲೂಕು ಸಮಾವೇಶವನ್ನು ಉದ್ಘಾಟಿಸಿ ಮಾತಾಡುತ್ತಿದ್ದರು. ಕಟ್ಟಡ ಕಾರ್ಮಿಕರಿಗೆ ಸಿಗಬೇಕಾದ ಮದುವೆ ಸವಲತ್ತು, ಮಕ್ಕಳ ಸ್ಕಾಲರ್ ಶಿಪ್, ಆರೋಗ್ಯ ಸಹಾಯಗಳೆಲ್ಲವೂ ಕಳೆದ 2 ವರ್ಷಗಳಿಂದ ಕಾರ್ಮಿಕರಿಗೆ ಸಮರ್ಪಕವಾಗಿ ವಿತರಣೆ ಆಗುತ್ತಿಲ್ಲ. ಮನೆ ಸಹಾಯ ನೀಡುವುದಾಗಿ ಸರಕಾರ ಹೇಳುತ್ತಾ ಬಂದರೂ, ಮಂಡಳಿಯಲ್ಲಿ ಸಾಕಷ್ಟು ಹಣ ಇದ್ದರೂ ಮನೆ ಸಹಾಯ ನೀಡಲಾಗುತ್ತಿಲ್ಲ ಎಂದರು.
ಈ ಸಂದರ್ಭ ಮಾತಾಡಿದ ಎಲ್ ಮಂಜುನಾಥ್ ಜನರ ಬೇಡಿಕೆಗಳಿಗೆ ಸ್ಪಂದಿಸದ ದೋರಣೆಯೇ ಸರ್ವಾಧಿಕಾರ ನೀತಿ. ರೈತರ ಹೋರಾಟಕ್ಕೆ ಸ್ಪಂದಿಸದಿರುವ ಸರಕಾರದ ವಿರುದ್ದ ಕಾರ್ಮಿಕ ವರ್ಗ ಸಮರಶೀಲ ಧ್ವನಿ ಎತ್ತಬೇಕಾಗಿದೆ. ನಮ್ಮ ಬೇಡಿಕೆಗಳಿಗಾಗಿ ಹೋರಾಡುತ್ತಾ ರೈತರ ಹೋರಾಟವನ್ನೂ ಬೆಂಬಲಿಸೋಣ ಎಂದರು.
ಕಟ್ಟಡ ಕಾರ್ಮಿಕರ ಸಮಸ್ಯೆಗಳ ವಿರುದ್ಧ ಹಾಗೂ ಸವಲತ್ತುಗಳ ವಿತರಣೆಯಲ್ಲಿ ಮಂಡಳಿಯ ನಿರ್ಲಕ್ಷ್ಯ ದೋರಣೆಯ ವಿರುದ್ಧ ಮಾರ್ಚ್ 15 ರಂದು ತಾಲೂಕು ಮಟ್ಟದ ಹೋರಾಟ ನಡೆಸಲು ನಿರ್ಧರಿಸಲಾಯಿತು. ಸಭೆಯ ಅದ್ಯಕ್ಷತೆಯನ್ನು ಧನಂಜಯ ಗೌಡ ವಹಿಸಿದ್ದರು. ವೇದಿಕೆಯಲ್ಲಿ ಜಯರಾಮ ಮಯ್ಯ, ಅಪ್ಪಿ, ನೆಬಿಸಾ ಹಾಗೂ ನಾರಾಯಣ ಕೈಕಂಬ ಇದ್ದರು. ರಾಮಚಂದ್ರ ಸ್ವಾಗತಿಸಿ ಕೊನೆಗೆ ಯುವರಾಜ ವಂದಿಸಿದರು.







