ನಿತ್ಯನೂತನವಾದ ಸಂಗೀತಕ್ಕೆ ಸಾವಿಲ್ಲ: ಡಾ. ವೀರೇಂದ್ರ ಹೆಗ್ಗಡೆ.

ಬೆಳ್ತಂಗಡಿ: ಧಾರ್ಮಿಕ ಶ್ರದ್ಧಾ ಕೇಂದ್ರಗಳು ಸಂಗೀತ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಸಂರಕ್ಷಣೆಗೆ ನಿರಂತರ ಪ್ರೋತ್ಸಾಹ ನೀಡುತ್ತವೆ. ಸಂಗೀತ ದೇವರಿಗೂ, ಭಕ್ತರಿಗೂ ಅತ್ಯತ ಪ್ರಿಯವಾಗಿದ್ದು ಎಲ್ಲಾ ದೇವಸ್ಥಾನಗಳಲ್ಲಿ ದೈನಂದಿನ ಪೂಜೆ, ಉತ್ಸವ, ಜಾತ್ರೆ ಸಂದರ್ಭದಲ್ಲಿ ಸಂಗೀತ ಸೇವೆ ಮಾಡುವ ಸಂಪ್ರದಾಯವಿದೆ. ಸಂಗೀತ ನಿತ್ಯನೂತನವಾಗಿದ್ದು ಸಂಗೀತ ಕಲೆಗೆ ಸಾವಿಲ್ಲ. ಅದು ಅವಿನಾಶಿಯಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಧರ್ಮಸ್ಥಳದಲ್ಲಿ ಮಣಿಕೃಷ್ಣ ಸ್ವಾಮಿ ಅಕಾಡೆಮಿ ಆಶ್ರಯದಲ್ಲಿ ರವಿವಾರ ಯುವ ಕಲಾಮಣಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ವಿದೇಶಗಳಲ್ಲಿಯೂ ವಿಶೇಷ ಗೌರವ, ಪ್ರೋತ್ಸಾಹ ಸಿಗುತ್ತದೆ.ಯುವ ಜನತೆ ಹಾಗೂ ಎಳೆಯ ಮಕ್ಕಳು ಕೂಡಾ ಇಂದು ಆಸಕ್ತಿಯಿಂದ ಸಂಗೀತ ಅಭ್ಯಾಸ ಮಾಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಬಾಲ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.
ಪ್ರಶಸ್ತಿ ಪ್ರದಾನ: ಸುರತ್ಕಲ್‌ನ ಶ್ರೇಯಾ ಕೊಳತ್ತಾಯರಿಗೆ ಯುವ ಕಲಾಮಣಿ ಪ್ರಶಸ್ತಿ, ಸುನಾದಕೃಷ್ಣ ಅಮೈ ರಿಗೆ ಮಣಿ, ಎಂ.ಕೆ. ವಾರ್ಷಿಕ ಪ್ರಶಸ್ತಿ, ನಾಗೇಶ್ ಬಪ್ಪನಾಡು ಅವರಿಗೆ ಈಶ್ವರಯ್ಯ ಸಂಸ್ಮರಣಾ ಪ್ರಶಸ್ತಿ ಮತ್ತು ಉಡುಪಿಯ ಕೆ.ಯು. ರಾಘವೇಂದ್ರ ರಾವ್ ಅವರಿಗೆ ಹಿರಿಯ ಸಾಧಕ ಸನ್ಮಾನ ಪುರಸ್ಕಾರ ನೀಡಿ ಗೌರವಿಸಲಾಯಿತು.
ಮಣಿಕೃಷ್ಣ ಸ್ವಾಮಿ ಅಕಾಡಮಿಯ ಅಧ್ಯಕ್ಷ ಗಣೇಶ್ ಕಾರ್ಣಿಕ್ ಸ್ವಾಗತಿಸಿದರು. ಕಾರ್ಯದರ್ಶಿ ನಿತ್ಯಾನಂದ ರಾವ್ ಧನ್ಯವಾದವಿತ್ತರು.







