ದಲಿತ ಸಂಘಟನೆ ಒಗ್ಗೂಡಿಸಲು ಫೆ.20, 21ರಂದು ಪದಾಧಿಕಾರಿಗಳ ಕಾರ್ಯಾಗಾರ
ಬೆಂಗಳೂರು, ಫೆ. 14: ವಿಘಟನೆಗೊಂಡಿರುವ ಮೂಲ ದಲಿತ ಸಂಘಟನೆ ಒಗ್ಗೂಡಿಸುವ ನಿಟ್ಟಿನಲ್ಲಿ ಫೆ. 20 ಮತ್ತು 21ರಂದು ಎರಡು ದಿನಗಳ ಕಾಲ ಬೆಂಗಳೂರಿನ ನಗರದ ಡಾ.ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪದಾಧಿಕಾರಿಗಳ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಸಂಸ ರಾಜ್ಯ ಸಂಚಾಲಕ ಲಕ್ಷ್ಮೀ ನಾರಾಯಣ ನಾಗವಾರ ತಿಳಿಸಿದ್ದಾರೆ.
ರವಿವಾರ ಹುಬ್ಬಳ್ಳಿ ಪ್ರವಾಸಿ ಮಂದಿರದಲ್ಲಿ ಜರುಗಿದ ಸಭೆ ಬಳಿಕ ಮಾತನಾಡಿದ ಅವರು, ದಲಿತ ಮುಖಂಡ ಇಂದೂಧರ ಹೊನ್ನಾಪುರ ದಿಕ್ಸೂಚಿ ಭಾಷಣ ಮಾಡಲಿದ್ದು, ಅಧ್ಯಕ್ಷತೆಯನ್ನು ಎನ್.ವೆಂಕಟೇಶ್ ವಹಿಸಲಿದ್ದಾರೆ. ಗುರುಪ್ರಸಾದ್ ಕೆರಗೋಡು ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ. ಮಾವಳ್ಳಿ ಶಂಕರ್, ವಿ.ನಾಗರಾಜ್, ಡಾ.ಅನಸೂಯ ಕಾಂಬ್ಳೆ, ಡಾ.ತುಕಾರಾಂ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ.
ಸಂವಿಧಾನ ಮತ್ತು ಪ್ರಜಾಭುತ್ವಕ್ಕೆ ಎದುರಾಗಿರುವ ಅಪಾಯಗಳು, ಖಾಸಗಿಕರಣದ ವಿರುದ್ಧ ಮೀಸಲಾತಿ, ಮೀಸಲಾತಿ ವರ್ಗೀಕರಣ, ರಾಷ್ಟ್ರೀಯ ಹೊಸ ಶಿಕ್ಷಣ ನೀತಿ, ಅಂಬೇಡ್ಕರ್ ಚಿಂತನೆ ಕುರಿತು ವಿವಿಧ ಕ್ಷೇತ್ರಗಳ ಗಣ್ಯರು ಉಪನ್ಯಾಸ ನೀಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟವನ್ನು ಬೆಂಬಲಿಸಬೇಕು. ದಲಿತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೀಡುತ್ತಿದ್ದ ವೇತನ ಕಡಿತ ಕೂಡಲೇ ಹಿಂಪಡೆಯಬೇಕು. ಎಸ್ಸಿ-ಎಸ್ಟಿ ಆದಾಯ ಮಿತಿಯನ್ನು 15ಲಕ್ಷ ರೂ. ವರಮಾನಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿ ಮಾರ್ಚ್ 2ಕ್ಕೆ ಎಲ್ಲ ಜಿಲ್ಲಾ ಕ್ಷೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.







