ಪೋಷಕ ಕಲಾವಿದರ ಆರ್ಥಿಕ ಪರಿಸ್ಥಿತಿ ಶೋಚನೀಯ: ಹಿರಿಯ ಕಲಾವಿದ ಕುಕನೂರು ಬಾಬಣ್ಣ
ವರದರಾಜು ಪ್ರಶಸ್ತಿ ಪ್ರದಾನ
ಬೆಂಗಳೂರು, ಫೆ. 14: ಸಿನಿಮಾಗಳಲ್ಲಿ ಅಧಿಕಾರಿ, ಶ್ರೀಮಂತರ ಪಾತ್ರವಹಿಸುವ ಹಲವು ಪೋಷಕ ಕಲಾವಿದರು, ನಿಜ ಜೀವನದಲ್ಲಿ ಆರ್ಥಿಕವಾಗಿ ತೀರ ಸಂಕಷ್ಟದ ಜೀವನ ಅನುಭವಿಸುತ್ತಿದ್ದಾರೆಂದು ಹಿರಿಯ ಕಲಾವಿದ ಕುಕನೂರು ಬಾಬಣ್ಣ ತಿಳಿಸಿದ್ದಾರೆ.
ಶನಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಸ್.ಪಿ.ವರದರಾಜು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಾತನಾಡಿದ ಅವರು, ಮನೆಯಲ್ಲಿ ಅಡುಗೆಗೂ ಪರದಾಡುತ್ತಿದ್ದ ಪರಿಸ್ಥಿತಿಗಳನ್ನು ಎದುರಿಸಿದ್ದೇನೆಂದು ತಿಳಿಸಿದ್ದಾರೆ.
ತೀರ ಕಷ್ಟಕರವಾದ ಸಂದರ್ಭದಲ್ಲಿ ಸಿಂಧನೂರಿನಿಂದ ಬಂದ ಹುಸೇನಪ್ಪ ಎಂಬುವವರು ‘ರಕ್ತರಾತ್ರಿ’ ನಾಟಕದಲ್ಲಿ ಶ್ರೀಕೃಷ್ಣನ ಪಾತ್ರ ಮಾಡಲು ಅವಕಾಶ ಮಾಡಿಕೊಟ್ಟರು. ಪ್ರತಿನಿತ್ಯ 500 ರು.ಗಳನ್ನು ನೀಡಲು ಒಪ್ಪಿದರು. ಇದರಿಂದ, ದಿನಸಿ ಪದಾರ್ಥಗಳನ್ನು ಖರೀದಿಸಿ, ಊಟ ಮಾಡಿದೆವು ಎಂದು ತಮ್ಮ ನೋವಿನ ದಿನಗಳನ್ನು ನೆನಪಿಸಿದರು.
ಹಿರಿಯ ಪೋಷಕ ನಟ ದೊಡ್ಡಣ್ಣ ಮಾತನಾಡಿ, ಆಪಾರ ಜ್ಞಾನವನ್ನುಳ್ಳ ಅಜಾತ ಶತ್ರುವಾಗಿದ್ದ ವರದರಾಜರು ಸಿನಿಮಾ ಕತೆಗಳನ್ನು ವಿವರಿಸುವ ಸಂದರ್ಭದಲ್ಲಿ ಪಾತ್ರಗಳು ಹೇಗಿರಬೇಕು ಎಂಬುದಾಗಿ ಹೇಳುತ್ತಿದ್ದರು. ಯಾವುದೇ ಸಿನಿಮಾ ಇದ್ದರೂ ಸಂಪೂರ್ಣವಾಗಿ ನಟನೆಯನ್ನು ವಿವರಿಸುತ್ತಿದ್ದರು. ಅವರ ಶ್ರಮದಿಂದಾಗಿ ಡಾ.ರಾಜಕುಮಾರ್ ಅವರು ದೊಡ್ಡ ಮಟ್ಟಕ್ಕೆ ಬೆಳೆಯುವುದಕ್ಕೆ ಸಾಧ್ಯವಾಯಿತೆಂದು ಅವರು ತಿಳಿಸಿದರು.
ನಟಿ ಸುಧಾರಾಣಿ ಮಾತನಾಡಿ, ಪ್ರಾರಂಭದ ಹಂತದಲ್ಲಿ ನನಗೆ ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಆಸಕ್ತಿ ಇರಲಿಲ್ಲ. ಆದರೆ, ರಾಜ್‍ಕುಮಾರ್ ಕುಟುಂಬದ ಜೊತೆಗೆ ನನ್ನನ್ನು ವರದರಾಜುರವರು ಬೆಳೆಯುವುದಕ್ಕೆ ಅವಕಾಶ ನೀಡಿದ್ದರು. ಇದೇ ಕಾರಣದಿಂದಾಗಿ ಇಂದು ನಟಿಯಾಗಿ ಬೆಳೆಯುವುದಕ್ಕೆ ಕಾರಣವಾಯಿತು ಎಂದು ಅವರು ವಿವರಿಸಿದ್ದಾರೆ.
ಕಾರ್ಯಕ್ರಮದಲ್ಲಿ ನಟ ರಾಘವೇಂದ್ರ ರಾಜ್‍ಕುಮಾರ್, ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.







