ಇಂಧನ ಬೆಲೆ ಏರಿಕೆಗೆ ವಿರೋಧ: ಎಂಟನೇ ದಿನಕ್ಕೆ ಕಾಲಿಟ್ಟ ಬೋರ್ವೆಲ್ ಮಾಲಕರ ಪ್ರತಿಭಟನೆ
ರಾಜ್ಯದಲ್ಲೆಡೆ ಬೋರ್ವೆಲ್ ಕಾಮಗಾರಿ ಸ್ಥಗಿತ

ಸಾಂದರ್ಭಿಕ ಚಿತ್ರ
ಬೆಂಗಳೂರು, ಫೆ.14: ಕೇಂದ್ರ ಸರಕಾರ ಇಂಧನ ಬೆಲೆ ದಿನೇ ದಿನೇ ಏರಿಕೆ ಮಾಡುತ್ತಿದೆ ಎಂದು ಆರೋಪಿಸಿ ರಾಜ್ಯ ವ್ಯಾಪಿ ಬೋರ್ವೆಲ್ (ಕೊಳವೆಬಾವಿ) ಮಾಲಕರು ತಮ್ಮ ಕಾರ್ಯವನ್ನು ಸ್ಥಗಿತಗೊಳಿಸಿ, ನಡೆಯುತ್ತಿರುವ ಪ್ರತಿಭಟನೆ ಇಂದಿಗೆ ಎಂಟನೇ ದಿನಕ್ಕೆ ಕಾಲಿಟ್ಟಿದೆ.
ಕರ್ನಾಟಕ ರಿಗ್ ಓನರ್ಸ್ ಸಂಘದ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯುತ್ತಿದ್ದು, ಇಂಧನ ಬೆಲೆ, ಬಿಡಿಭಾಗಗಳು ಸೇರಿದಂತೆ ಇನ್ನಿತರ ದರ ಏರಿಕೆ ಆಗುತ್ತಿರುವುದು ಖಂಡಿಸಿ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರಗಳ ಕಾರ್ಯ ವೈಖರಿ ವಿರೋಧಿಸಿ ಫೆ.8ರಿಂದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯ ವ್ಯಾಪಿ ಜಿಲ್ಲಾ ಘಟಕಗಳಲ್ಲಿ ಬೋರ್ವೆಲ್ ಕಾಮಗಾರಿಗಳನ್ನು ಸ್ಥಗಿತಗೊಳಿಸಿ, ಪ್ರತಿಭಟನೆಗೆ ಕರೆ ನೀಡಲಾಗಿತ್ತು.
ಈ ಕುರಿತು ವಾರ್ತಾಭಾರತಿ ಪತ್ರಿಕೆಯೊಂದಿಗೆ ಮಾತನಾಡಿದ ಸಂಘದ ಕಾರ್ಯದರ್ಶಿ ಎಸ್.ನಾಗೇಶ್, ಕೇಂದ್ರ ಸರಕಾರ ಬೆಲೆ ಏರಿಕೆ ಮಾಡುತ್ತಿರುವುದನ್ನು ವಿರೋಧಿಸಿ ಫೆ.8ರಿಂದ ರಾಜ್ಯ ವ್ಯಾಪಿ ಈ ಹೋರಾಟ ನಡೆಸಲಾಗುತ್ತಿದ್ದು, ಬೆಂಗಳೂರಿನಲ್ಲಿಯೇ 200ಕ್ಕೂ ಅಧಿಕ ಬೋರ್ವೆಲ್ ಕಾಮಗಾರಿ ಯಂತ್ರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ದಿನನಿತ್ಯ ತೈಲ ಬೆಲೆ ಏರಿಕೆ ಮಾಡಿದರೆ ನಮಗೆ ನಷ್ಟವೇ ಹೆಚ್ಚು. ಅಲ್ಲದೆ, ಕಾರ್ಮಿಕರ ವೇತನ, ತಿಂಡಿ ಸೇರಿದಂತೆ ಇನ್ನಿತರೆ ನಿರ್ವಹಣೆಗಾಗಿಯೇ ನಾವೇ ಕೈಯಿಂದ ಹಣ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಅನೇಕ ಸಮಸ್ಯೆಗಳನ್ನು ಎದುರಿಸಿ, ದುಡಿಯುವ ಬದಲು ನಾವು ಕಾಮಗಾರಿಗಳನ್ನೇ ಸ್ಥಗಿತಗೊಳಿಸಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರಕಾರ ಈ ಕೂಡಲೇ ತೈಲ ಬೆಲೆ ಮೇಲಿನ ತೆರಿಗೆ ವಾಪಸ್ಸು ಪಡೆಯಬೇಕು.ಅದೇ ರೀತಿ, ಬಿಡಿ ಭಾಗಗಳ ಮೇಲಿನ ತೆರಿಗೆ ಹೊರೆಯೂ ತಗ್ಗಿಸಬೇಕು. ಇಲ್ಲದಿದ್ದರೆ, ನಾವು ನಮ್ಮ ಬೋರ್ವೆಲ್ ವಾಹನಗಳನ್ನು ಮಾರಾಟ ಮಾಡುವ ಪರಿಸ್ಥಿತಿ ದೂರ ಉಳಿದಿಲ್ಲ ಎಂದು ನಾಗೇಶ್ ಹೇಳಿದರು.







