ವಿಶ್ವಾಸಾರ್ಹವಲ್ಲದ ಮೂಲಗಳಿಂದ ಹಣ ಸ್ವೀಕರಿಸಿದ್ದ ‘ನ್ಯೂಸ್ ಕ್ಲಿಕ್’: ಇಡಿ ಆರೋಪ

photo: Newsclick.in
ಹೊಸದಿಲ್ಲಿ,ಫೆ.14: ಸುದ್ದಿ ಜಾಲತಾಣ ‘ನ್ಯೂಸ್ಕ್ಲಿಕ್ ’ ಮತ್ತು ಅದರ ನಿರ್ದೇಶಕರು 2018,ಮಾರ್ಚ್ ಮತ್ತು 2020,ಮಾರ್ಚ್ ನಡುವೆ ವಿಶ್ವಾಸಾರ್ಹವಲ್ಲದ ಮೂಲಗಳಿಂದ 30.51 ಕೋ.ರೂ.ಗೂ ಹೆಚ್ಚಿನ ಹಣವನ್ನು ಸ್ವೀಕರಿಸಿದ್ದರು ಎಂದು ಜಾರಿ ನಿರ್ದೇಶನಾಲಯ (ಈ.ಡಿ.)ದ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ. ಅಮೆರಿಕದಲ್ಲಿಯ ಒಂದೇ ವಿಳಾಸವನ್ನು ಹೊಂದಿರುವ ಚಾರ್ಟೆರ್ಡ್ ಅಕೌಂಟಂಟ್ ಕಂಪನಿಗಳಿಂದ ಈ ಹಣ ಸಂದಾಯವಾಗಿತ್ತು ಎಂದು ಈ ಮೂಲಗಳು ತಿಳಿಸಿವೆ.
ಈ ಕಂಪನಿಗಳಿಂದ ಸ್ವೀಕರಿಸಲಾಗಿದ್ದ ಹಣವನ್ನು ‘ಚಿಲ್ಲರೆ ನಿರ್ವಹಣೆ ಕಾರ್ಯ’ಕ್ಕಾಗಿ ಸಿಪಿಎಂ ಪಕ್ಷದ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸುತ್ತಿರುವ ನ್ಯೂಸ್ಕ್ಲಿಕ್ನ ಪಾಲುದಾರರೋರ್ವರಿಗೆ ನೀಡಲು ಮತ್ತು ಸಾಮಾಜಿಕ ಹೋರಾಟಗಾರ ಗೌತಮ ನವ್ಲಾಖಾ ಅವರಿಗೆ ‘ವೇತನ ’ ಪಾವತಿಸಲು ಬಳಸಲಾಗಿತ್ತು ಎಂದು ಅವು ಹೇಳಿವೆ. ನವ್ಲಾಖಾ ಸದ್ಯ ಭೀಮಾ-ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದಾರೆ. ಈ.ಡಿ. ಕಳೆದ ಮೂರು ದಿನಗಳಿಂದಲೂ ನ್ಯೂಸ್ಕ್ಲಿಕ್ ಕಚೇರಿ ಮತ್ತು ಅದರ ನಿರ್ದೇಶಕರ ಮನೆಗಳ ಮೇಲೆ ದಾಳಿಗಳನ್ನು ನಡೆಸುತ್ತಿದೆ.
ದಿಲ್ಲಿ ಪೊಲೀಸ್ನ ಆರ್ಥಿಕ ಅಪರಾಧಗಳ ಘಟಕವು ದಾಖಲಿಸಿಕೊಂಡಿರುವ ಎಫ್ಐಆರ್ನ ಆಧಾರದಲ್ಲಿ ಈ.ಡಿ.ನ್ಯೂಸ್ಕ್ಲಿಕ್ ಮತ್ತು ಅದರ ನಿರ್ದೇಶಕರ ವಿರುದ್ಧ ಅಕ್ರಮ ಹಣ ವರ್ಗಾವಣೆ ತನಿಖೆಯನ್ನು ನಡೆಸಲು ಮುಂದಾಗಿದೆ ಎಂದೂ ಮೂಲಗಳು ತಿಳಿಸಿವೆ.
ಶುಕ್ರವಾರ ಹೇಳಿಕೆಯೊಂದನ್ನು ನೀಡಿದ್ದ ನ್ಯೂಸ್ಕ್ಲಿಕ್,ತನಗೆ ಮತ್ತು ತನ್ನ ಪತ್ರಕರ್ತರಿಗೆ ಕಳಂಕ ಹಚ್ಚುವ ಪ್ರಯತ್ನವಾಗಿ ತಪ್ಪು ಮಾಹಿತಿಗಳ ಆಯ್ದ ಸೋರಿಕೆಯನ್ನು ಮಾಡಲಾಗುತ್ತಿದೆ ಎಂದು ತಿಳಿಸಿತ್ತು.







