‘ಭಟ್ಕಳ ನವಾಯತರ ಕಿರು ವಿವರಣಾತ್ಮಕ ಅಧ್ಯಯನ’ ಗ್ರಂಥ ಲೋಕಾರ್ಪಣೆ

ಭಟ್ಕಳ: ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರ ಮತ್ತು ಭಟ್ಕಳದ ನವಾಯತ್ ಮಹೆಫಿಲ್ ನ ಸಂಯುಕ್ತಾಶ್ರಯದಲ್ಲಿ ನವಾಯತ್ ಭಾಷೆಯ ಭಾಷಾಶಾಸ್ತ್ರೀಯ ಸಂಶೋಧನಾ ಗ್ರಂಥ ಬಿಡುಗಡೆ ಭಟ್ಕಳದ ಮುಶ್ಮಾ ಮೊಹಲ್ಲಾದ ನವಜೆ ಫಾತರ್ ಬಳಿ ಸಂಜೆ ನವಾಯತ್ ಮೆಹಫಿಲ್ ಅಧ್ಯಕ್ಷ ಅಬ್ದುಲ್ ರಹಮಾನ್ ಮೊಹತೆಶಮ್ ಬಿಡುಗಡೆಗೊಳಿಸಿದರು.
ಸಂಶೋಧನ ಪ್ರಬಂಧ ಭಟ್ಕಳ 'ನವಾಯತರ ಕಿರು ವಿವರಣಾತ್ಮಕ ಅಧ್ಯಯನ’ ಲೋಕಾರ್ಪಣೆಗೊಳಿಸಿ ಮಾತನಾಡಿದ ಹರ್ಷಾ ಶಂಕರ್ ಭಟ್, ಭಟ್ಕಳದ ನವಾಯತ್ ಸಮುದಾಯದ ನಾವಾಯತ್ ಭಾಷಾ ಶೈಲಿಯನ್ನು ಅಧ್ಯಯನ ಮಾಡುವ ಸಂದರ್ಭ ಒದಗಿ ಬಂದಿದ್ದು ನನಗೆ ಸಂತಸ ತಂದಿದೆ. ಭಟ್ಕಳಕ್ಕೆ ಬಂದು ಇಲ್ಲಿನ ಸಮುದಾಯದ ಅತಿಥಿ ಸತ್ಕಾರ್ಯ ಸ್ವೀಕರಿಸುವ ಭಾಗ್ಯ ಒದಗಿ ಬಂದಿದ್ದು ನನ್ನ ಪುಣ್ಯ ಎಂದು ಭಾವಿಸಿದ್ದೇನೆ. ಮನೆ ಮಗಳಂತೆ ನೋಡಿಕೊಂಡ ಇಲ್ಲಿನ ಜನರಿಗೆ ಸದಾ ಋಣಿಯಾಗಿದ್ದೇನೆ, ನವಾಯತಿ ಭಾಷೆ ನನ್ನ ಎರಡನೇ ಮಾತೃಭಾಷೆಯಾದಂತಾಗಿದೆ ಎಂದರು.
ಗ್ರಂಥ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ, ಕೊಂಕಣಿ ಮತ್ತು ನವಾಯತಿ ಭಾಷೆಗಳಲ್ಲಿ ಹಲವಾರು ಸಾಮತ್ಯಗಳಿದ್ದು ಭಾಷೆಗಳು ಮನುಷ್ಯರನ್ನು ಬೆಸೆಯುವಂತಹ ಕೆಲಸ ಮಾಡುತ್ತಿವೆ. ಭಾಷೆಯ ಮೂಲಕ ಬದಲಾವಣೆ ತರೋಣ ಎಂದರು.
ಸಮಾರಂಭದಲ್ಲಿ ಮೌಲಾನಾ ಅಬುಲ್ ಹಸನ್ ಅಲಿ ನದ್ವಿ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಲಿಯಾಸ್ ನದ್ವಿ, ವಿಶ್ವ ಕೊಂಕಣಿ ವಿದ್ಯಾರ್ಥಿ ವೇತನ ನಿಧಿಯ ಕಾರ್ಯದರ್ಶಿ ಹಾಗೂ ಹಾಂಗ್ಯೋ ಐಸ್ ಕ್ರೀಂ ಆಡಳಿತ ನಿರ್ದೇಶಕ ಪ್ರದೀಪ್ ಜಿ. ಪೈ, ತಂಝೀಮ್ ಸಂಸ್ಥೆಯ ಉಪಾಧ್ಯಕ್ಷ ಅತಿರ್ರಹ್ಮಾನ್ ಮುನಿರಿ, ವಿಶ್ವ ಕೊಂಕಣಿ ಕೇಂದ್ರದ ಸಂಶೋಧನಾ ವಿಭಾಗದ ನಿರ್ದೇಶಕ ಗುರುದತ್ತ ಬಂಟ್ವಾಳಕರ್, ವಸಂತ್ ಖಾರ್ವಿ, ಅಂಜುಮನ್ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಇಸ್ಮಾಯಿಲ್, ಖಮರ್ ಸಾದಾ, ನಕ್ಷೆ ನವಾಯತ್ ಪತ್ರಿಕೆಯ ಸಂಪಾದಕ ಮೌಲಾನ ಅಬ್ದುಲ್ ಅಲೀಂ ಕಾಸ್ಮಿ ಮುಂತಾದವರು ಉಪಸ್ಥಿತರಿದ್ದರು.
ಅತಿರ್ರಹ್ಮಾನ್ ಶಾಬಂದ್ರಿ ಕಾರ್ಯಕ್ರಮ ನಿರೂಪಿಸಿದರು.








