ದ.ಕ.ಜಿಲ್ಲೆಯ ಜನತೆಗೆ ಕನ್ನಡ ಬೆಳಗಿಸಿದ ಕೀರ್ತಿ: ಡಾ. ಪುಂಡಿಕಾ ಗಣಪಯ್ಯ ಭಟ್
ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಮಂಗಳೂರು,ಫೆ.14: ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡವನ್ನು ಬೆಳಗಿಸಿದ ಕೀರ್ತಿಯು ಕನ್ನಡ ಮನೆಮಾತಲ್ಲದ ದ.ಕ.ಜಿಲ್ಲೆಯ ಜನತೆಗೆ ಸಲ್ಲುತ್ತದೆ ಎಂದು ಇತಿಹಾಸ ಸಂಶೋಧಕ ಡಾ. ಪುಂಡಿಕಾ ಗಣಪಯ್ಯ ಭಟ್ ಹೇಳಿದರು.
ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಶಾರದಾ ವಿದ್ಯಾಲಯದಲ್ಲಿ ಜರಗುತ್ತಿರುವ ದ.ಕ. ಜಿಲ್ಲಾ ಮಟ್ಟದ 24ನೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರವಿವಾರ ಅವರು ಸಮಾರೋಪ ಭಾಷಣಗೈದರು.
ಸಮೀಕ್ಷೆಯ ಪ್ರಕಾರ ದ.ಕ.ಜಿಲ್ಲೆಯ ಶೇ.15ರಷ್ಟು ಜನರ ಮನೆಮಾತು ಮಾತ್ರ ಕನ್ನಡವಾಗಿದೆ. ಉಳಿದ ಜನರು ಇತರ ಪ್ರಾದೇಶಿಕ ಭಾಷೆಗಳನ್ನು ಮನೆಗಳಲ್ಲಿ ಮಾತನಾಡುತ್ತಾರೆ. 1961ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 34 ಭಾಷೆಗಳನ್ನಾಡುವ ಜನರಿದ್ದರು. ಬಹುಭಾಷಿಗರ ಜಿಲ್ಲೆಯಾಗಿರುವ ದ.ಕ.ಜಿಲ್ಲೆಯಲ್ಲಿ 1300 ವರ್ಷಗಳ ಹಿಂದೆಯೇ ಕನ್ನಡವನ್ನು ಬಳಸುತ್ತಿದ್ದರು ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಮನೆಮಾತು ಕನ್ನಡ ಅಲ್ಲದಿದ್ದರೂ ಕೂಡ ಯಥೇಚ್ಛವಾಗಿ ಕನ್ನಡವನ್ನು ಬಳಸಿದ ಮತ್ತು ಬೆಳೆಸಿದ ಪರಂಪರೆಯನ್ನು ದ.ಕ.ಜಿಲ್ಲೆಯ ಜನರು ಹೊಂದಿದ್ದಾರೆ ಎಂದು ಡಾ. ಪುಂಡಿಕಾ ಗಣಪಯ್ಯ ಭಟ್ ನುಡಿದರು.
ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡಿದರು. ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಅವಲೋಕನಾ ನುಡಿಗಳನ್ನಾಡಿದರು.
ಸಂಗೀತ ನಿರ್ದೇಶಕ ಗುರುಕಿರಣ್, ಶಾರದಾ ವಿದ್ಯಾಲಯದ ಅಧ್ಯಕ್ಷ ಪ್ರೊ.ಎಂಬಿ ಪುರಾಣಿಕ್, ಕೇಂದ್ರ ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ ಮತ್ತಿತರರು ಉಪಸ್ಥಿತರಿದ್ದರು.
ದಯಾನಂದ ಕಟೀಲು ಸ್ವಾಗತಿಸಿದರು. ಕದ್ರಿ ನವನೀತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸಾಧಕರಿಗೆ ಸನ್ಮಾನ
ವಿವಿಧ ಕ್ಷೇತ್ರದ ಸಾಧಕರಾದ ರಾಮನಾಥ ಗೋರೆ ಬೆಳ್ತಂಗಡಿ, ಪಿ.ವೊ.ಗಿರೀಶ್, ಕೆ. ಮಂಜುನಾಥ ಕಾಮತ್ ಕಡಿರುದ್ಯಾವರ, ಅಬ್ರಹಾಂ ವರ್ಗಿಸ್ ನೆಲ್ಯಾಡಿ, ಕುದ್ಕೋಳಿ ವಾಸುಶೆಟ್ಟಿ ಸಿದ್ಧಕಟ್ಟೆ, ಉಜ್ರೆ ಈಶ್ವರ ಭಟ್, ಅಬ್ದುಲ್ ಲತೀಫ್ ಸಾಹೇಬ್ ಮಾಲಾಡಿ, ಕರುಣಾಕರ ಸುವರ್ಣ ಉಪ್ಪಿನಂಗಡಿ, ಸೇಸಪ್ಪರ ರೈ ರಾಮಕುಂಜ, ಜಯಲಕ್ಷ್ಮಿ ಬಿ.ಆರ್., ಪಿಲಿ ಗಂಗಾಧರ, ಪಿ.ಜಿ. ಅಂಬೆಕಲ್‌ಲ್ ಚೊಕ್ಕಾಡಿ, ವಾಸುದೇವ ಕಟ್ಟೆಮನೆ ಕಲ್ಲುಗುಂಡಿ, ಟಿ.ಎಂ.ಶಹೀದ್ ತೆಕ್ಕಿಲ್‌ಲ್, ಮಾಲತಿ ಶೆಟ್ಟಿ ಮಾಣೂರು, ಪ್ರಸಾದ್ ಶೆಟ್ಟಿ ಮಾಣೂರು, ಕೃಷ್ಣರಾಜ್, ಬೈಲುಗುತ್ತು ಮಾರಪ್ಪ ಶೆಟ್ಟಿ, ಪೊಳಲಿ ಸುಬ್ಬರಾವ್, ಚಂದ್ರಹಾಸ ಶೆಟ್ಟಿ ರಂಗೋಲಿ, ಚಂದ್ರಹಾಸ ಚೌಟ ಬಂದಿಗುಡ್ಡೆ ಮಾಣಿ, ಮಧುಕರ ಮಲ್ಯ ಮಡಂತ್ಯಾರು, ಶ್ರೀಕರ ರಾವ್ ಅಡ್ಕಾರಿ, ಶ್ರೀಧರ ಜಿ. ಭಿಡೆ, ಧನ್ಯಕುಮಾರ್ ರೈ ಬಿಳಿಯೂರುಗುತ್ತು, ಗಣಪತಿ ನಾಯಕ್ ಕರ್ಪೆ, ಧನಂಜಯ ಕೊಟ್ಟಾರಿ, ಯೋಗೀಶ್ ರಾವ್ ಏಳಿಂಜೆ, ರವಿ ನಾಯ್ಕಾಪು, ಬಿ.ಎಸ್. ಹಸನಬ್ಬ ಅಮ್ಮೆಂಬಳ ಹಾಗೂ ಬಾಲಪತ್ರಿಭೆಗಳಾದ ರಾಕೇಶ್ ಕೃಷ್ಣ ಪುತ್ತೂರು, ಅನಘಾ ಮತ್ತು ಬೊಳುವಾರಿನ ಆಂಜನೇಯ ಯಕ್ಷಗಾನ ಕಲಾಸಂಘ. ಮುಲ್ಕಿ ಕೆರೆಕಾಡಿನ ವಿನಾಯಕ ಯಕ್ಷಕಲಾ ತಂಡ, ಕಿನ್ನಿಗೋಳಿಯ ಭ್ರಾಮರಿ ಮಹಿಳಾ ಮಂಡಳಿಯ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.
6 ನಿರ್ಣಯಗಳು
ಸಮ್ಮೇಳನದ ಬಹಿರಂಗ ಅಧಿವೇಶನದಲ್ಲಿ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ 6 ನಿರ್ಣಯಗಳನ್ನು ಮಂಡಿಸಿದರು.
1. ಈ ಹಿಂದಿನ 23 ಸಮ್ಮೇಳನದಲ್ಲಿ ಮಂಡಿಸಿದ ಎಲ್ಲಾ ನಿರ್ಣಯಗಳನ್ನು ಜಾರಿಗೊಳಿಸಬೇಕು.
2. ಯಕ್ಷಗಾನ ಕಲೆಯನ್ನು ರಾಜ್ಯದ ಪ್ರಾಧಿನಿಧಿಕ ಕಲೆಯಾಗಿ ಅಂಗೀಕರಿಸಬೇಕು.
3. ತುಳುವನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಘೋಷಿಸಬೇಕು.
4. ಪ್ರಗತಿಯ ಜೊತೆಗೆ ಪ್ರಕೃತಿ ರಕ್ಷಿಸಬೇಕು.
5. ಕನ್ನಡ ಶಾಲೆಗಳ ಪ್ರತಿಯೊಂದು ತರಗತಿಗಳಿಗೂ ಒಬ್ಬ ಶಿಕ್ಷಕರನ್ನು ನೇಮಿಸಬೇಕು.
6. ಜಿಲ್ಲೆಯ ಪ್ರತಿಯೊಂದು ತಾಲೂಕಿಗೆ ಕನ್ನಡ ಭವನ ನಿರ್ಮಿಸಬೇಕು.
ದ.ಕ.ಜಿಲ್ಲಾ 24ನೆ ಸಾಹಿತ್ಯ ಸಮ್ಮೇಳನ ಸಮಾಪನ
ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಶಾರದಾ ವಿದ್ಯಾಲಯದಲ್ಲಿ ಕಳೆದ ಮೂರು ದಿನದಿಂದ ಜರಗುತ್ತಿರುವ ದ.ಕ. ಜಿಲ್ಲಾ ಮಟ್ಟದ 24ನೆ ಕನ್ನಡ ಸಾಹಿತ್ಯ ಸಮ್ಮೇಳನವು ರವಿವಾರ ಸಮಾಪನಗೊಂಡಿತು.
ಡಾ.ಎಂ.ಪ್ರಭಾಕರ ಜೋಶಿಯ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನವನ್ನು ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಶುಕ್ರವಾರ ಉದ್ಘಾಟಿಸಿದ್ದರು. ಆ ಬಳಿಕ ವಿದ್ವತ್ ಸನ್ಮಾನ, ಸಾಧಕರಿಗೆ ಸನ್ಮಾನ, ವಿವಿಧ ಗೋಷ್ಠಿಗಳು, ಸಾಂಸ್ಕೃತಿಕ ಸಂಭ್ರಮ, ಅಗಲಿದ ಸಾಧಕರ ಸಂಸ್ಮರಣೆ, ಬಹಿರಂಗ ಅಧಿವೇಶನ ಇತ್ಯಾದಿ ಕಾರ್ಯಕ್ರಮಗಳು ಯಶಸ್ಸಿಯಾಗಿ ನಡೆದವು.










