ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಪ್ರಗತಿಗೆ ಅಡ್ಡಿಬೇಡ: ಕೋಟ ಶ್ರೀನಿವಾಸ ಪೂಜಾರಿ

ಮಂಗಳೂರು, ಫೆ.14: ಪ್ರಗತಿ ಮತ್ತು ಪ್ರಕೃತಿಯ ರಕ್ಷಣೆಯು ಜೊತೆಯಾಗಿ ಸಾಗಬೇಕು. ಚಿಂತಕರ ಚಾವಡಿಯಲ್ಲಿರುವವರು ಕೂಡ ಈ ಬಗ್ಗೆ ಜಾಗೃತಿ ಮೂಡಿಸುತ್ತಿರಬೇಕು. ಆದರೆ, ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಪ್ರಗತಿಗೆ ಅಡ್ಡಿಪಡಿಸುವ ಷಡ್ಯಂತ್ರಕ್ಕೆ ಯಾರೂ ಅವಕಾಶ ನೀಡಬಾರದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಶಾರದಾ ವಿದ್ಯಾಲಯದಲ್ಲಿ ಜರಗುತ್ತಿರುವ ದ.ಕ. ಜಿಲ್ಲಾ ಮಟ್ಟದ 24ನೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರವಿವಾರ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಅಭಿವೃದ್ಧಿಗೆ ಸರಕಾರ ಮುಂದಾದಾಗ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತರುತ್ತಿದ್ದಾರೆ. ಈ ತಡೆಯಾಜ್ಞೆಯ ಹಿಂದೆ ಒಳ್ಳೆಯ ಉದ್ದೇಶವಿದ್ದರೆ ಅದನ್ನು ಮಾನ್ಯ ಮಾಡಬಹುದು. ಆದರೆ, ವೃಥಾ ತಡೆಯಾಜ್ಞೆ ತಂದು ಅತ್ತ ಪ್ರಕರಣವನ್ನು ದಡಮುಟ್ಟಿಸದಂತಹವರ ಬಗ್ಗೆ ಸಮಾಜ ಎಚ್ಚರಿಕೆಯಿಂದಿರಬೇಕಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ನುಡಿದರು.
ತಡೆಯಾಜ್ಞೆ ತರುವಾಗಿನ ಉತ್ಸಾಹವು ಬಳಿಕ ಕೆಲವರಲ್ಲಿ ಕಾಣುವುದಿಲ್ಲ. ಪ್ರತಿರೋಧಿಸುವವರೇ ಮೌನಕ್ಕೆ ಶರಣಾಗಿ ಹೋರಾಟವನ್ನು ತುದಿಮುಟ್ಟಿಸದಿರುವುದು ವಿಪರ್ಯಾಸ ಮಾತ್ರವಲ್ಲ, ಸಂಶಯಕ್ಕೂ ಎಡೆಮಾಡಿಕೊಡುತ್ತದೆ. ಹಾಗಾಗಿ ಯಾವುದೇ ರೀತಿಯ ಚಳುವಳಿ, ಹೋರಾಟಗಳು ಸಾಮಾಜಿಕ ಕಳಕಳಿ ಹೊಂದಿರಲಿ ಎಂದು ಕೋಟ ಶ್ರೀನಿವಾಸ ಪೂಜಾರಿ ಆಶಿಸಿದರು.







