ಮಂಗಳೂರು: ಪೋಸ್ಟ್‌ಮ್ಯಾನ್‌ಗಳಿಗೆ ಸನ್ಮಾನ ಕಾರ್ಯಕ್ರಮ

ಮಂಗಳೂರು, ಫೆ.14: ಅಂಚೆಯಣ್ಣ(ಪೋಸ್ಟ್‌ಮ್ಯಾನ್) ಜನರೊಂದಿಗೆ ಭಾವನಾತ್ಮಕ ಸಂಬಂಧವನ್ನು ಬೆಸೆದುಕೊಂಡಿದ್ದಾರೆ ಎಂದು ಅಖಿಲ ಭಾರತ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಮಾಧವ ಎಂ.ಕೆ. ಹೇಳಿದ್ದಾರೆ.
ಯುವಬ್ರಿಗೇಡ್ ವತಿಯಿಂದ ನಗರದ ಪಾಂಡೇಶ್ವರದಲ್ಲಿರುವ ಪ್ರಧಾನ ಅಂಚೆ ಕಚೇರಿಯಲ್ಲಿ ರವಿವಾರ ನಡೆದ ‘ಭಾವನೆಗಳ ಕಿಂದರಿ ಜೋಗಿ’ ಪೋಸ್ಟ್‌ಮ್ಯಾನ್‌ಗಳ ಸನ್ಮಾನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರತಿಯೊಂದು ವೃತ್ತಿಯೂ ಗೌರವಯುತ ಮತ್ತು ಶ್ರೇಷ್ಠವಾದದ್ದು. ಸುಮಾರು 170 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅಂಚೆ ಇಲಾಖೆ ಪ್ರಾಮಾಣಿಕ ಸೇವೆಗೆ ಹೆಸರಾಗಿದೆ. ಜನಮಾನಸದ ನಡುವೆ ಭಾವನೆಗಳನ್ನು ಹಂಚುತ್ತಿದೆ. ಈ ದೇಶದಲ್ಲಿ ಪೋನ್, ರೈಲು, ಹಡಗು, ವಿಮಾನ ಹೋಗಲಾಗದ ಸ್ಥಳಗಳು ಇರಬಹುದು. ಆದರೆ ಅಂಚೆಯಣ್ಣ ಹೋಗದ ಜಾಗ ಇರಲಿಕ್ಕಿಲ್ಲ. ಅಂಚೆ ಇಲಾಖೆ ಶರೀರದ ನರನಾಡಿಯಂತೆ ಕಾರ್ಯನಿರ್ವಹಿಸುತ್ತದೆ. ಅಂಚೆ ಇಲಾಖೆಯ ಸೇವೆ ಎಲ್ಲ ಕಾಲದಲ್ಲಿಯೂ ಪ್ರಸ್ತುತವಾಗಿರುತ್ತದೆ. ಕೊರೋನ ಸಂದರ್ಭದಲ್ಲಿ ಪತ್ರಗಳ ಜತೆಗೆ ಮನೆ ಮನೆಗಳಿಗೆ ಔಷಧಿಯನ್ನು ಕೂಡ ತಲುಪಿಸುವ ಜವಾಬ್ದಾರಿಯನ್ನು ಅಂಚೆ ಇಲಾಖೆ ನಿಭಾಯಿಸಿದೆ ಎಂದು ಮಾಧವ ಹೇಳಿದರು.
ಯುವ ಬ್ರಿಗೇಡ್‌ನ ಸಮನ್ವಯ ಸಂಚಾಲಕ ಚಂದ್ರಶೇಖರ್ ಕೆ.ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ 113 ಮಂದಿ ಅಂಚೆ ಪೇದೆಗಳನ್ನು ಸಮ್ಮಾನಿಸಲಾಯಿತು.





