ಸುಳ್ಳು ಕೇಸ್ ದಾಖಲಿಸುವ ಬೆದರಿಕೆ ಹಾಕಿ ಹಣ ಸುಲಿಗೆ ಆರೋಪ: ಪೊಲೀಸರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ತಂಡ
ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ

ಬೆಂಗಳೂರು, ಫೆ. 14: ಕಬ್ಬಿಣವನ್ನು ಕಳ್ಳತನ ಮಾಡಿರುವುದಾಗಿ ಸುಳ್ಳು ಕೇಸ್ ದಾಖಲಿಸುವುದಾಗಿ ಬೆದರಿಸಿ 15 ಲಕ್ಷ ರೂ. ಸುಲಿಗೆ ಮಾಡಿದ್ದಾರೆನ್ನಲಾದ ಐವರು ಪೊಲೀಸರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ 2 ಕೋಟಿ ರೂ.ಪರಿಹಾರ ಕೊಡಿಸಬೇಕು ಎಂದು ನೊಂದವರ ತಂಡ ಹೈಕೋರ್ಟ್ ಮೆಟ್ಟಿಲೇರಿದೆ.
ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಬೆಂಗಳೂರಿನ ಹುಳಿಮಾವು ಠಾಣೆ ಎಸ್‍ಐ ಮೆಹಬೂಬ್ ಪಾಷಾ, ಪೇದೆಗಳಾದ ಪ್ರವೀಣ್, ರಾಜಶೇಖರ್, ಶೈಲೇಶ್ ಹಾಗೂ ಚಂದ್ರಶೇಖರ್ ವಿರುದ್ಧ ಸೂಲಿಬೆಲೆಯ ಯಾರಬ್, ಮುಷ್ತಾಕ್ ಪಾಷಾ, ಅಫ್ರೋಜ್ ಹಾಗೂ ಸೈಯದ್ ಹೈಕೋರ್ಟ್‍ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ.
ಜ.14ರಂದು ಮಫ್ತಿಯಲ್ಲಿ ಯಾರಬ್‍ನ ಗುಜರಿ ಅಂಗಡಿಗೆ ಬಂದ ಪೇದೆಗಳು ಕಾಲಿನಿಂದ ಒದ್ದು, ಅವಾಚ್ಯವಾಗಿ ನಿಂದಿಸಿ ಎಳೆದೊಯ್ದಿದ್ದಲ್ಲದೆ, ಇತರರ ಮನೆಗಳಿಗೂ ನುಗ್ಗಿ ಎಲ್ಲರನ್ನೂ ಕಾರಿನಲ್ಲಿ ಎಳೆದುಕೊಂಡು ಹೋದರು. ಹುಳಿಮಾವು ಠಾಣೆಗೆ ಕರೆದೊಯ್ದು, ಎಲ್ಲರ ಮೇಲೆ ಕಬ್ಬಿಣ ಕಳ್ಳತನ ಕೇಸು ಹಾಕುತ್ತೇವೆ, 25 ಲಕ್ಷ ರೂ.ಕೊಟ್ಟರೆ ಬಿಟ್ಟುಬಿಡುತ್ತೇವೆ ಎಂದು ಹೇಳಿ ಹಲ್ಲೆ ನಡೆಸಿದರು. ಅದೇ ದಿನ ರಾತ್ರಿ 9 ಗಂಟೆಗೆ ಕುಟುಂಬದವರು 15 ಲಕ್ಷ ರೂ.ಹೊಂದಿಸಿಕೊಂಡು ಠಾಣೆಗೆ ಬಂದು ಎಸ್‍ಐ ಮೆಹಬೂಬ್ ಪಾಷಾ ಕಳುಹಿಸಿದ ಪೇದೆಯ ಕೈಗೆ ಹಣ ನೀಡಿದ ನಂತರ ರಾತ್ರಿ 2 ಗಂಟೆಗೆ ಮನೆಗೆ ಕಳುಹಿಸಿದರು. ನಂತರವೂ ಚಂದ್ರಶೇಖರ್ ಪೋನ್ ಪೇ ಮೂಲಕ 4 ಸಾವಿರ ರೂ.ಪಡೆದಿದ್ದಾರೆ ಎಂದು ಅರ್ಜಿದಾರರು ದೂರಿದ್ದಾರೆ.







