ಲವ್ ಜಿಹಾದ್ ಕಾನೂನು ಪ್ರಸ್ತಾವ ಕೈಬಿಡಿ: ಜನವಾದಿ ಮಹಿಳಾ ಸಂಘಟನೆ ಕಾರ್ಯದರ್ಶಿ ಗೌರಮ್ಮ ಒತ್ತಾಯ
‘ನಮ್ಮ ಬದುಕು ನಮ್ಮ ಆಯ್ಕೆ' ದುಂಡು ಮೇಜಿನ ಸಭೆ
ಬೆಂಗಳೂರು, ಫೆ. 14: ರಾಜ್ಯದಲ್ಲಿ ಸಂವಿಧಾನ ಬಾಹಿರವಾಗಿ ಹುಟ್ಟು ಹಾಕಿರುವ ಅರ್ಥಹೀನವಾದ ‘ಲವ್ ಜಿಹಾದ್' ಎಂಬ ಪದದ ಕಾನೂನು ಪ್ರಸ್ತಾಪವನ್ನು ರಾಜ್ಯ ಸರಕಾರ ಕೈ ಬಿಡಬೇಕೆಂದು ಜನವಾದಿ ಮಹಿಳಾ ಸಂಘಟನೆಯ ಕಾರ್ಯದರ್ಶಿ ಗೌರಮ್ಮ ಒತ್ತಾಯಿಸಿದ್ದಾರೆ.
ರವಿವಾರ ಜನವಾದಿ ಮಹಿಳಾ ಸಂಘಟನೆಯ ವತಿಯಿಂದ ನಗರದ ವಿಮಾ ಕಾರ್ಪೊರೇಷನ್ ನೌಕರರ ಸಂಘದಲ್ಲಿ ನನ್ನ ಬದುಕು ನನ್ನ ಆಯ್ಕೆ ಸಂವಿಧಾನದ 21ನೇ ಪರಿಚ್ಚೇದದ ಕುರಿತು ಆಯೋಜಿಸಿದ್ದ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಂತರ್ ಜಾತಿ ವಿವಾಹವಾದ ಯುವಕ-ಯುವತಿಯರನ್ನು ಮರ್ಯಾದೆ ಹತ್ಯೆ ಹಾಗೂ ಅಂತರ್ ಧರ್ಮಿಯವಾಗಿ ಮದುವೆಯಾದ ಯುವಕ, ಯುವತಿಯರನ್ನು ಹತ್ಯೆ ಮಾಡುವುದು ಇಲ್ಲವೇ ಕಿರುಕುಳ ನೀಡುವಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಈಗ ಇದಕ್ಕೆ ಪೂರಕವಾಗಿ ಬಿಜೆಪಿ ಸರಕಾರ ಲವ್‍ಜಿಹಾದ್‍ಗೆ ಕಾನೂನಿನ ಸ್ವರೂಪ ನೀಡಲು ಮುಂದಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅವರು ವಿಷಾದಿಸಿದ್ದಾರೆ.
ನಮ್ಮ ಸಂವಿಧಾನವು ದೇಶದ ಪ್ರತಿಯೊಬ್ಬ ಪ್ರಜೆಗೂ ವಿವಾಹದ ಹಕ್ಕು, ಧಾರ್ಮಿಕ ಸ್ವಾತಂತ್ರ್ಯ, ತಮಗೆ ಇಷ್ಟಬಂದ ಧರ್ಮಕ್ಕೆ ಮತಾಂತರಗೊಳ್ಳುವ ಹಾಗೂ ಎಲ್ಲ ಧರ್ಮಗಳನ್ನು ನಿರಾಕರಿಸಿ ಸಂವಿಧಾನಕ್ಕಷ್ಟೆ ಬದ್ಧವಾಗಿ ನಡೆದುಕೊಳ್ಳುವ ಅವಕಾಶ ನೀಡಿದೆ. ಆದರೆ, ಕೇಂದ್ರದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ನಂತರ ಸಂವಿಧಾನದ ಮೌಲ್ಯಗಳನ್ನು ನಾಶ ನಿರ್ಮೂಲನೆ ಮಾಡುವಂತಹ ಕಾನೂನುಗಳನ್ನು ಜಾರಿ ಮಾಡಲು ಮುಂದಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ನೈತಿಕ ಪೊಲೀಶ್‍ಗಿರಿ ಮತ್ತಷ್ಟು ಹೆಚ್ಚಾಗುತ್ತಿದ್ದು, ಜನಸಾಮಾನ್ಯರು ಹಲ್ಲೆ, ಹತ್ಯೆಗೆ ಈಡಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಹಾಗೂ ಕಾನೂನು ವ್ಯವಸ್ಥೆ ಸಂವಿಧಾನ ಮೌಲ್ಯಗಳಿಗೆ ಬದ್ದವಾಗಿ ಕಾರ್ಯನಿರ್ವಹಿಸುವ ಮೂಲಕ ಅಂತರ್ ಜಾತಿ, ಅಂತರ್ ಧರ್ಮಿಯ ವಿವಾಹಿತರನ್ನು ರಕ್ಷಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಸಭೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷೆಯರಾದ ವಿಮಲಾ, ಲಕ್ಷ್ಮಿ, ವಕೀಲೆ ಮೈತ್ರಿ ಕೃಷ್ಣನ್, ಎಚ್.ಜಿ.ಜಯಲಕ್ಷ್ಮಿ, ಬರಹಗಾರ ಡಾ.ಗಾಯತ್ರಿ, ಮಮತಾ, ಸುರೇಂದ್ರ ರಾವ್ ಮತ್ತಿತರರಿದ್ದರು.
ಹಕ್ಕೊತ್ತಾಯಗಳು
-ರಾಜ್ಯದಲ್ಲಿ ಸಂವಿಧಾನ ಬಾಹಿರವಾಗಿ ಹುಟ್ಟು ಹಾಕಿದ ಅರ್ಥಹೀನ ಲವ್ ಜಿಹಾದ್ ಎಂಬ ಪದದ ಕಾನೂನಿನ ಪ್ರಸ್ತಾಪ ಕೈ ಬಿಡಬೇಕು.
-ವಯಸ್ಕರ ಸಂವಿಧಾನದತ್ತ ಆಯ್ಕೆ ಸ್ವಾತಂತ್ರ್ಯವನ್ನು ಹತ್ತಿಕ್ಕಬಾರದು.
-ಸುಪ್ರೀಂಕೋರ್ಟ್ ಮತ್ತು ಹಲವು ಉಚ್ಚ ನ್ಯಾಯಾಲಯಗಳು ಆಯ್ಕೆ ಸ್ವಾತಂತ್ರ್ಯವನ್ನು ಎತ್ತಿ ಹಿಡಿದ ತೀರ್ಪುಗಳನ್ನು ಗೌರವಿಸಬೇಕು.
-ರಾಜ್ಯದಲ್ಲಿ ನಡೆದ ಮರ್ಯಾದೆಯ ಹೆಸರಿನ ಹತ್ಯೆಗಳ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಹಾಗೂ ಮರ್ಹಾದೆ ಹತ್ಯೆಗಳನ್ನು ನಿಷೇಧಿಸುವ ಕಾನೂನು ಜಾರಿ ಮಾಡಬೇಕು.
-ಅಂತರ್ ಧರ್ಮಿಯ, ಅಂತರ್ ಜಾತಿಯ ವಿವಾಹಿತರಿಗೆ ಸರಿಯಾದ ರಕ್ಷಣೆ ಮತ್ತು ಸೌಲಭ್ಯಗಳನ್ನು ಕಲ್ಪಿಸಬೇಕು.







